Site icon Vistara News

Shubhman Gill | ದ್ವಿಶತಕದ ಸಾಧನೆಯ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಶುಭ್​ಮನ್​ ಗಿಲ್; ಏನು ಹೇಳಿದರು ಅವರು?

shubman gill

ಹೈದರಾಬಾದ್​: ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ (Shubhman Gill)​ ಅವರ ಕೊಡುಗೆ ದೊಡ್ಡದು. 149 ಎಸೆತಗಳಲ್ಲಿ 208 ರನ್​ ಬಾರಿಸಿದ ಅವರು ಭಾರತ ತಂಡಕ್ಕೆ 8 ವಿಕೆಟ್​ಗೆ 349 ರನ್ ಪೇರಿಸಲು ನೆರವಾದರು. ಇದು ಏಕ ದಿನ ಮಾದರಿಯಲ್ಲಿ ಅವರ ಮೊದಲ ದ್ವಿಶತಕ. ಅಲ್ಲದೆ, ಸತತ ಎರಡು ಪಂದ್ಯಗಳಲ್ಲಿ ಮೂರಂಕಿ ಮೊತ್ತ ದಾಟಿದ ಸಂಭ್ರಮ. ಲಂಕಾ ವಿರುದ್ಧದ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯದಲ್ಲಿ ಅವರು 116 ರನ್ ಬಾರಿಸಿದ್ದರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು ತಮ್ಮ 200 ರನ್​ಗಳ ಗಡಿ ದಾಟಿದ ಸಾಧನೆಯ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಒತ್ತಡವಿಲ್ಲದೇ ಎದುರಾಳಿ ಬೌಲರ್​ಗಳನ್ನು ಹಿಮ್ಮೆಟ್ಟಿಸಿರುವುದೇ ನನ್ನ ಯಶಸ್ಸಿನ ಗುಟ್ಟು ಎಂದು ಹೇಳಿಕೊಂಡಿದ್ದಾರೆ. ನಮ್ಮ ತಂಡದ ವಿಕೆಟ್​ಗಳು ಸತತವಾಗಿ ಪತನಗೊಂಡಿದ್ದವು. ಹೀಗಾಗಿ ನ್ಯೂಜಿಲ್ಯಾಂಡ್​ ತಂಡದ ಬೌಲರ್​ಗಳು ಮೇಲುಗೈ ಸಾಧಿಸಿದ್ದರು. ಇಂಥ ಸಮಯದಲ್ಲಿ ಅವರ ಮೇಲೆ ಒತ್ತಡ ಹೇರುವುದೇ ನನ್ನ ಗುರಿಯಾಗಿತ್ತು. ಡಾಟ್​ ಬಾಲ್​ಗಳನ್ನು ಮುಟ್ಟದೇ ಹಾಗೆಯೇ ಬಿಟ್ಟು, ಗ್ಯಾಪ್​ಗಳನ್ನು ನೋಡಿ ರನ್​ಗಳನ್ನು ಬಾರಿಸಲು ಶುರು ಮಾಡಿದೆ. ಅದು ಯಶಸ್ವಿಯಾದ ಬಳಿಕ ದೊಡ್ಡ ಹೊಡೆತಗಳಿಗೆ ಕೈ ಹಾಕಿದೆ ಎಂದು ಅವರು ಹೇಳಿದ್ದಾರೆ.

200 ರನ್​ ಬಾರಿಸುವುದು ನನ್ನ ಗುರಿಯಾಗಿರಲಿಲ್ಲ. ಆದರೆ, 47ನೇ ಓವರ್​ನಲ್ಲಿ ಎರಡು ಸಿಕ್ಸರ್ ಬಾರಿಸಿದಾಗ ಮೂರನೇ ಸಿಕ್ಸರ್ ಬಾರಿಸಿ ದ್ವಿಶತಕದ ಸಾಧನೆ ಮಾಡಬಹುದು ಎಂಬ ವಿಶ್ವಾಸ ಮೂಡಿತು. ಅದಕ್ಕೆ ತಕ್ಕ ಹಾಗೆ ಆಡಿದೆ ಎಂದು ಹೇಳಿದರು. ಇದೇ ವೇಳೆ ಅವರು ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಪಂದ್ಯದಲ್ಲಿ ದ್ವಿ ಶತಕ ಬಾರಿಸಿದ್ದ ಇಶಾನ್​ ಕಿಶನ್ ಅವರನ್ನು ಹೊಗಳಿದರು. ಕಿಶನ್​ ನನ್ನ ಉತ್ತಮ ಗೆಳೆಯ. ಅವರ ಜತೆ ಪಟ್ಟಿಯಲ್ಲಿ ದ್ವಿ ಶತಕದ ಸಾಧನೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ ಎಂದರು.

ಇದನ್ನೂ ಓದಿ | Shubman Gill | ಭಾರತ ತಂಡದ ಪರ ದ್ವಿಶತಕ ಬಾರಿಸಿದ ಐದನೇ ಆಟಗಾರ ಶುಬ್ಮನ್​ ಗಿಲ್​, ಉಳಿದವರು ಯಾರು?

Exit mobile version