ದುಬೈ : ಭಾರತ ತಂಡದ ಯುವ ಬ್ಯಾಟರ್ ಶುಭ್ಮನ್ ಗಿಲ್ (Shubhman Gill) ಅವರಿಗೆ ಐಸಿಸಿಯ ಜನವರಿ ತಿಂಗಳ ಉತ್ತಮ ಆಟಗಾರ ಗೌರವ ಲಭಿಸಿದೆ. ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯಲ್ಲಿ ಅವರು ಅದ್ವಿತೀಯ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಉತ್ತಮ ಆಟಗಾರ ಗೌರವ ಸಿಕ್ಕಿದೆ. ಇದೇ ವೇಳೆ 19 ವರ್ಷದೊಳಗಿನವರ ಮಹಿಳೆಯರ ಟಿ20 ವಿಶ್ವ ಕಪ್ನ ಫೈನಲ್ನಲ್ಲಿ ಭಾರತ ತಂಡದ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದ ಇಂಗ್ಲೆಂಡ್ ತಂಡದ ನಾಯಕಿ ಗ್ರೇಸ್ ಸ್ಕೀವರ್ಗೆ ಅತ್ಯುತ್ತಮ ಯುವ ಆಟಗಾರ್ತಿ ಪ್ರಶಸ್ತಿ ಲಭಿಸಿದೆ.
23 ವರ್ಷದ ಭಾರತದ ಆಟಗಾರ ಜನವರಿ ತಿಂಗಳಲ್ಲಿ 567 ರನ್ ಬಾರಿಸಿದ್ದರು. ಅದರಲ್ಲಿ ಮೂರು ಶತಕಗಳು ಸೇರಿಕೊಂಡಿವೆ. ಹೈದರಾಬಾದ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಏಕ ದಿನ ಹಣಾಹಣಿಯಲ್ಲಿ ಅವರು ದ್ವಿಶತಕ ಕೂಡ ಬಾರಿಸಿದ್ದರು.
ನ್ಯೂಜಿಲ್ಯಾಂಡ್ ತಂಡದ ಡೆವೋನ್ ಕಾನ್ವೆ ಹಾಗೂ ಭಾರತ ತಂಡದ ಮೊಹಮ್ಮದ್ ಸಿರಾಜ್ ಉತ್ತಮ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಆಟಗಾರರಾಗಿದ್ದರು. ಅವರಿಬ್ಬರನ್ನು ಜಾಗತಿಕ ವೋಟಿಂಗ್ನಲ್ಲಿ ಸೋಲಿಸಿದ ಗಿಲ್ ಗೌರವ ತಮ್ಮದಾಗಿಸಿಕೊಂಡಿದ್ದಾರೆ. 2022ರಲ್ಲಿ ವಿರಾಟ್ ಕೊಹ್ಲಿ ಈ ಪ್ರಶಸ್ತಿ ಗೆದ್ದ ಬಳಿಕ ತಿಂಗಳ ಆಟಗಾರ ಪ್ರಶಸ್ತಿ ಪಡೆದವರು ಗಿಲ್.
ಇದನ್ನೂ ಓದಿ : Virat Kohli: ಶುಭ್ಮನ್ ಗಿಲ್ ಭವಿಷ್ಯದ ಕ್ರಿಕೆಟ್ ತಾರೆ; ವಿರಾಟ್ ಕೊಹ್ಲಿ ವಿಶ್ವಾಸ
ಜನವರಿ ತಿಂಗಳು ನನ್ನ ಪಾಲಿಗೆ ಅತ್ಯಂತ ಸ್ಮರಣೀಯ. ಹೆಚ್ಚು ಸ್ಕೋರ್ಗಳನ್ನು ಬಾರಿಸುವ ಜತೆಗೆ ಐಸಿಸಿಐ ತಿಂಗಳ ಪ್ರಶಸ್ತಿ ಪಡೆದ ಗೌರವ ನನ್ನದಾಗಿದೆ ಎಂದು ಶುಭ್ಮನ್ ಗಿಲ್ ಐಸಿಸಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾತನಾಡಿದ್ದಾರೆ.