ಚೆನ್ನೈ: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್ ಗಿಲ್(Shubman Gill) ಅವರು ಚೆನ್ನೈಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರವಷ್ಟೇ ಬಿಸಿಸಿಐ ಶುಭಮನ್ ಗಿಲ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿತ್ತು. ಅಫಘಾನಿಸ್ತಾನ ವಿರುದ್ಧದ ಪಂದ್ಯದಿಂದ ಗಿಲ್ ಹೊರಗುಳಿಯಲಿದ್ದಾರೆ ಆದರೆ, ಪಾಕ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದೀಗ ಮಂಗಳವಾರ ಬಂದ ಮಾಹಿತಿ ಪ್ರಕಾರ ಶುಭಮನ್ ಗಿಲ್ಗೆ ಮತ್ತೆ ಜ್ವರ, ತಲೆನೋವು, ನಿಶಕ್ತಿ ಕಾಡಿದ್ದು ಪ್ಲೇಟ್ ಲೆಟ್ (Platelets) ಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಅವರನ್ನು ಚೆನ್ನೈಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಲೀಗ್ ಪಂದ್ಯಕ್ಕೆ ಅನುಮಾನ
ಇನ್ನೊಂದು ಮೂಲಗಳ ಪ್ರಕಾರ ಶುಭಮನ್ ಗಿಲ್ ಬಹುತೇಕ ವಿಶ್ವಕಪ್ನ ಲೀಗ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯೂ ಅಧಿಕವಾಗಿದೆ ಎನ್ನಲಾಗಿದೆ. ಏಕೆಂದರೆ ಡೆಂಗ್ಯೂ ಬಾಧಿತ ವ್ಯಕ್ತಿ ಪರಿಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರಗಳ ಸಮಯಾವಕಾಶ ಬೇಕು. ಹೀಗಾಗಿ ಅವರು ಲೀಗ್ ಪಂದ್ಯದಲ್ಲಿ ಆಡುವುದು ಅನುಮಾನ.
ಜ್ವರದ ಕಾರಣ ಗಿಲ್ ಆಸ್ಟ್ರೇಲಿಯಾ(IND vs AUS) ವಿರುದ್ಧದ ಪಂದ್ಯದಿಂದ ಹೊರಗುಳಿದ್ದರು. ಅವರ ಬದಲು ಎಡಗೈ ಆಟಗಾರ ಇಶಾನ್ ಕಿಶನ್ಗೆ(Ishan Kishan) ಅವಕಾಶ ನೀಡಲಾಗಿತ್ತು. ಈ ಹಿಂದೆ ಗಿಲ್ ಆರೋಗ್ಯದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ರಾಹುಲ್ ದ್ರಾವಿಡ್, ಶುಭಮನ್ ಗಿಲ್ ಆರೋಗ್ಯ ಸುಧಾರಿಸುತ್ತಿದೆ. ಯಾವುದೇ ಆತಂಕವಿಲ್ಲ. ಅವರಲ್ಲಿ ಡೆಂಗ್ಯೂವಿನ ಪ್ರಾಥಮಿಕ ಲಕ್ಷಣಗಳು ಮಾತ್ರ ಕಂಡುಬಂದಿದೆ. ಆದರೆ ಅವರನ್ನು ತಂಡದಿಂದ ಹೊರಗಿಡಲಾಗಿಲ್ಲ ಎಂದಿದ್ದರು. ಆದರೆ ನಾಯಕ ರೋಹಿತ್ ಅವರು “ಎಲ್ಲರೂ ಶೇ.100ರಷ್ಟು ಫಿಟ್ ಆಗಿದ್ದಾರೆ. ಗಿಲ್ ಫಿಟ್ ಆಗಿಲ್ಲ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರ ತಂಡ ಅವರ ಮೇಲೆ ಪ್ರತಿದಿನವೂ ನಿಗಾ ಇಡುತ್ತಿದೆ ಎಂದಿದ್ದರು. ಗಿಲ್ ಅವರ ಚೊಚ್ಚಲ ವಿಶ್ವಕಪ್ ಆಡುವ ಕನಸಿಗೆ ಡೆಂಗ್ಯೂ ಬಾಧಿಸಿದ್ದು ವಿಪರ್ಯಾಸವೇ ಸರಿ.
ಇದನ್ನೂ ಓದಿ ICC World Cup 2023 : ನೆದರ್ಲ್ಯಾಂಡ್ಸ್ ವಿರುದ್ಧ ನ್ಯೂಜಿಲ್ಯಾಂಡ್ಗೆ 99 ರನ್ ಸುಲಭ ಜಯ
ಭರವಸೆಯ ಆಟಗಾರ
ಗಿಲ್ ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ದ್ವಿಶತಕ ಗಳಿಸುವ ಜತಗೆ ಈಗಾಗಕಲೇ ಅತಿ ಕಡಿಮೆ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಮತ್ತು ಶತಕ ದಾಖಲಿಸಿ ಮಿಂಚುತಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಸ್ವಲ್ಪ ಕುಸಿತ ಕಂಡಿದ್ದ ಅವರು ಮುಂದಿನ ಸರಣಿಯಲ್ಲಿ ಮತ್ತೆ ಪ್ರಚಂಡ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದರು. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್ನಲ್ಲಿ 890 ರನ್ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ತಿಂಗಳು ಮುಕ್ತಾಯ ಕಂಡ ಏಷ್ಯಾ ಕಪ್ನಲ್ಲಿ 302 ರನ್ ಬಾರಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ಕೆಲವು ಇನಿಂಗ್ಸ್ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ.