ಮುಂಬಯಿ: ಭಾರತ ತಂಡದ ಭವಿಷ್ಯದ ನಾಯಕನೆಂದೇ ಪರಿಗಣಿಸಲ್ಪಟ್ಟಿರುವ ಯುವ ಆಟಗಾರ ಶುಭಮನ್ ಗಿಲ್(Shubman Gill) ಅವರನ್ನು ಈಗಾಗಲೇ ಏಕದಿನ ಮತ್ತು ಟಿ20 ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಇದೀಗ ಟೆಸ್ಟ್ನಲ್ಲಿಯೂ ಅವರಿಗೆ ಉಪನಾಯಕ ಸ್ಥಾನ ನೀಡಲಾಗುತ್ತದೆ ಎಂದು ವರದಿಯಾಗಿದೆ. ಮುಂದಿನ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಿಲ್ಗೆ ಉಪನಾಯಕ ಪಟ್ಟ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್ ಗೌತಮ್ ಗಂಭೀರ್ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶುಭಮನ್ ಗಿಲ್ಗೆ ಏಕದಿನ ತಂಡದಲ್ಲಿ ಉಪನಾಯಕನ ಸ್ಥಾನ ನೀಡಲಾಗಿದೆ. ಲಂಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದೇ ಆದರೆ ಗಿಲ್ ಮುಂದಿನ ದಿನದಲ್ಲಿ ತಂಡದ ನಾಯಕನಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಗಿಲ್ ನಾಯಕತ್ವ ವಹಿಸಿ ಸರಣಿ ಗೆದ್ದಿದ್ದರು.
ಶುಭಮನ್ ಗಿಲ್ ಅವರು ಕಳೆದ 11 ಟೆಸ್ಟ್ ಇನಿಂಗ್ಸ್ನಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದಾರೆ. 13, 8, 6, 10, 29*, 2, 26, 36, 10, 23, 0. ಗಿಲ್ ಗಳಿಕೆ. ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯೂ ಮುಖ್ಯ ಕಾರಣ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ವೇಳೆ ಗಿಲ್ ಆರಂಭಿಕನಾಗಿ ಆಡುತ್ತಿದ್ದರು. ಈ ವೇಳೆ ಉತ್ತಮ ಸಾಧನೆ ಕೂಡ ಮಾಡಿದ್ದರು. ಆದರೆ, ಆ ಬಳಿಕ ಇವರನ್ನು ದ್ವಿತೀಯ ಕ್ರಮಾಂಕದಲ್ಲಿ ಆಡಿಸಲಾಯಿತು. ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಆಡಲಾರಂಭಿಸಿದರು. ಬಾಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಪಂದ್ಯ ಸೆಪ್ಟೆಂಬರ್ನಲ್ಲಿ ಆರಂಭಗೊಳ್ಳಲಿದೆ.
ಇದನ್ನೂ ಓದಿ IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ
ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ ಕ್ರಿಕೆಟ್ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್ ಸೇರಿ ಮಹತ್ವದ ಟಿ20 ವಿಶ್ವಕಪ್ ಟೂರ್ನಿ ಕೈತಪ್ಪಿತ್ತು.
ಬಾಂಗ್ಲಾ ಸರಣಿಯ ವೇಳಾಪಟ್ಟಿ
ಸೆಪ್ಟೆಂಬರ್-19 ಮೊದಲ ಟೆಸ್ಟ್ ಪಂದ್ಯ. ತಾಣ: ಚೆನ್ನೈ
ಸೆಪ್ಟೆಂಬರ್-27 ದ್ವಿತೀಯ ಟೆಸ್ಟ್. ತಾಣ; ಕಾನ್ಪುರ
ಅಕ್ಟೋಬರ್-6 ಮೊದಲ ಟಿ20. ತಾಣ: ಧರ್ಮಶಾಲಾ
ಅಕ್ಟೋಬರ್-9 ದ್ವಿತೀಯ ಟಿ20. ತಾಣ: ದೆಹಲಿ
ಅಕ್ಟೋಬರ್-12 ಮೂರನೇ ಟಿ20. ತಾಣ: ಹೈದರಾಬಾದ್