Site icon Vistara News

IPL 2024: ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ; ಪಾಂಡ್ಯ ಮುಂಬೈ ಪಾಲು!

Shubman Gill And Hardik Pandya

Shubman Gill To Captain Gujarat Titans In IPL 2024 As Hardik Pandya Joins MI

ನವದೆಹಲಿ: 2024ರ ಐಪಿಎಲ್‌ ಕ್ರಿಕೆಟ್‌ ಟೂರ್ನಿ (IPL 2024) ಆರಂಭವಾಗುವ ಮೊದಲೇ ತಂಡಗಳಲ್ಲಿ ಭಾರಿ ಬದಲಾವಣೆ ಆಗುತ್ತಿದೆ. ಭಾರತ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ, ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ತೋರಿ ಸೈ ಎನಿಸಿಕೊಂಡಿರುವ ಶುಭಮನ್‌ ಗಿಲ್‌ (Shubman Gill) ಅವರು ಗುಜರಾತ್‌ ಟೈಟಾನ್ಸ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ಮುಂಬೈ ಇಂಡಿಯನ್ಸ್‌ (Mumbai Indians) ತಂಡವನ್ನು ಸೇರಿದ ಹಿನ್ನೆಲೆಯಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡವು ಶುಭಮನ್‌ ಗಿಲ್‌ ಅವರನ್ನು ನಾಯಕ ಎಂದು ಘೋಷಿಸಿದೆ.

ಕಳೆದ ಐಪಿಎಲ್‌ ಋತುವಿನಲ್ಲಿ 890 ರನ್‌ ಗಳಿಸಿ ಟೂರ್ನಿಯ ಅತ್ಯಧಿಕ ರನ್‌ ಸ್ಕೋರರ್‌ ಎನಿಸಿದ 24 ವರ್ಷದ ಶುಭಮನ್‌, ಏಕದಿನ ಹಾಗೂ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಕಳೆದ ಮೂರ್ನಾಲ್ಕು ಐಪಿಎಲ್‌ಗಳಲ್ಲಿ ಅವರಿಂದ ರನ್‌ಗಳು ಹರಿದುಬಂದಿವೆ. ಮೇಲಾಗಿ ಯಾವಾಗಲೂ ಸಮಚಿತ್ತತೆಯಿಂದ ಇರುವ ಶುಭಮನ್‌ ಗಿಲ್‌, ತಂಡವನ್ನು ಮುನ್ನಡೆಸಲು ಸಮರ್ಥ ಎಂಬುದನ್ನು ಗುಜರಾತ್‌ ಟೈಟಾನ್ಸ್‌ ತಂಡದ ಮ್ಯಾನೇಜ್‌ಮೆಂಟ್‌, ಅವರನ್ನೇ ನಾಯಕ ಎಂದು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. ಐಪಿಎಲ್‌ನಲ್ಲಿ 91 ಪಂದ್ಯಗಳನ್ನು ಆಡಿರುವ ಶುಭಮನ್‌ ಗಿಲ್‌ 2,790 ರನ್‌ ಗಳಿಸಿದ್ದಾರೆ.

ರಿಟೇನ್‌ ಆದರೂ ಮುಂಬೈಗೆ ಜಿಗಿದ ಪಾಂಡ್ಯ

ಗುಜರಾತ್‌ ಟೈಟಾನ್ಸ್‌ ತಂಡವು ಹಾರ್ದಿಕ್‌ ಪಾಂಡ್ಯ ಅವರನ್ನು ರಿಟೇನ್‌ ಮಾಡಿದರೂ ಅವರು ಮುಂಬೈ ಇಂಡಿಯನ್ಸ್‌ ತಂಡ ಸೇರಿರುವುದು ಅಧಿಕೃತವಾಗಿದೆ. ಸುಮಾರು 15.25 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್‌ ತಂಡವು ಹಾರ್ದಿಕ್‌ ಪಾಂಡ್ಯ ಅವರನ್ನು ಸೆಳೆದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಕ್ಯಾಮೆರಾನ್‌ ಗ್ರೀನ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಪಾಲಾಗಿದ್ದಾರೆ. ಡಿಸೆಂಬರ್‌ 11ರವರೆಗೆ ಟ್ರೇಡಿಂಗ್‌ ವಿಂಡೋ ತೆರೆದಿರುವ ಕಾರಣ ಇನ್ನಷ್ಟು ಆಟಗಾರರು ತಂಡಗಳನ್ನು ಬದಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: IPL 2024 : ಆಟಗಾರರನ್ನು ಬಿಡುಗಡೆ ಮಾಡಿದ ಬಳಿಕ ಐಪಿಎಲ್ ತಂಡಗಳಲ್ಲಿ ಉಳಿದಿರುವ ಮೊತ್ತವೆಷ್ಟು?

ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ ತಂಡ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಟ್ರೇಡಿಂಗ್‌ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್‌ ತಂಡವು ಹಾರ್ದಿಕ್‌ ಪಾಂಡ್ಯ ಅವರನ್ನು ಖರೀದಿಸುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಗುಜರಾತ್‌ ಟೈಟನ್ಸ್‌ ತಂಡವು ಏಕಾಏಕಿ ರಿಟೇನ್‌ ಆದ ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಹಾರ್ದಿಕ್‌ ಪಾಂಡ್ಯ ಅವರನ್ನೇ ನಾಯಕ ಎಂದು ಘೋಷಿಸಿತ್ತು. ಆದರೆ, ದಿಢೀರ್‌ ಬೆಳವಣಿಗೆಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಹಾರ್ದಿಕ್‌ ಪಾಂಡ್ಯ ಅವರನ್ನು ಖರೀದಿಸಿದೆ.

ಹಾರ್ದಿಕ್ ಪಾಂಡ್ಯ 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ್ದರು. ಐಪಿಎಲ್ 2021ರವರೆಗೆ ಫ್ರಾಂಚೈಸಿಯೊಂದಿಗೆ ಇದ್ದರು. ಆದರೆ ಐಪಿಎಲ್ 2022 ಮೆಗಾ ಹರಾಜಿಗೆ ಮುಂಚಿತವಾಗಿ, ಮುಂಬೈ ಬರೋಡಾ ಕ್ರಿಕೆಟಿಗನನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಎರಡು ಹೊಸ ಫ್ರಾಂಚೈಸಿಗಳಲ್ಲಿ ಒಂದಾದ ಗುಜರಾತ್ ಟೈಟಾನ್ಸ್‌ ಹರಾಜಿಗೆ ಮುಂಚಿತವಾಗಿ ಅವರನ್ನು ಆಯ್ಕೆ ಮಾಡಿತ್ತು ಮತ್ತು ಅವರನ್ನು ಅವರ ನಾಯಕನನ್ನಾಗಿ ಹೆಸರಿಸಿತ್ತು.

ಹಾರ್ದಿಕ್ ಉತ್ತಮ ನಾಯಕತ್ವ ವಹಿಸಿ. ಜಿಟಿಯನ್ನು ತಮ್ಮ ಚೊಚ್ಚಲ ಋತುವಿನಲ್ಲಿ ಐಪಿಎಲ್ ಪ್ರಶಸ್ತಿ ಕಡೆಗೆ ಕೊಂಡೊಯ್ದರು .ನಂತರ ಗುಜರಾತ್ ಐಪಿಎಲ್ 2023 ರ ಫೈನಲ್​ಗೆ ಪ್ರವೇಶಿಸಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಸೋತು ಈ ಸಾಧನೆಯನ್ನು ರನ್ನರ್​ಅಪ್​ ಆಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version