ಲಂಡನ್: ಮದ್ಯದ ದೊರೆ, ಆರ್ಸಿಬಿ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್ ಮಲ್ಯ(Vijay Mallya) ಅವರ ಪುತ್ರ ಸಿದ್ಧಾರ್ಥ್ ಮಲ್ಯ (Siddharth Mallya) ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್(Jasmine) ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಿದ್ಧಾರ್ಥ್ ಮಲ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಾಸ್ಮಿನ್ ಜತೆಗಿರುವ ಫೋಟೊ ಪೋಸ್ಟ್ ಮಾಡಿ ಶೀಘ್ರದಲ್ಲೇ ವಿವಾಹವಾಗುವುದಾಗಿ ಘೋಷಿಸಿದ್ದರು. ಇದೀಗ ಈ ಜೋಡಿ ಲಂಡನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದೆ.
ವರ್ಷದ ಹಿಂದೆಯೇ ಪ್ರಪೋಸ್
ಬಹುಕಾಲದ ಗೆಳತಿ ಜಾಸ್ಮಿನ್‌ಗೆ(Siddharth Mallya Marries GF Jasmine) 2023ರ ಆರಂಭದಲ್ಲಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಇದಕ್ಕೆ ಜಾಸ್ಮಿನ್ ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಈ ಜೋಡಿ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಜಾಸ್ಮಿನ್ ಅವರು ರಿಂಗ್ ತೊಟ್ಟ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಮದುವೆಯಾದ ವಿಚಾರವನ್ನು ಖಚಿತಪಡಿಸಿದ್ದಾರೆ.
ದೀಪಿಕಾ ಜತೆ ಪ್ರೀತಿಯಲ್ಲಿ ಬಿದ್ದಿದ್ದ ಸಿದ್ಧಾರ್ಥ್
ಕೆಲವು ವರ್ಷಗಳ ಹಿಂದೆ ಬಾಲಿವುಡ್ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಡೇಟಿಂಗ್ ನಡೆಸುತ್ತಿದ್ದರು. ಇವರು ಐಪಿಎಲ್ ಪಂದ್ಯಗಳಿಗೆ ಜತೆಯಾಗಿ ತೆರಳುತ್ತಿದ್ದರು. ಒಂದೊಮ್ಮೆ ಇಬ್ಬರು ಪಂದ್ಯ ವೀಕ್ಷಿಸುತ್ತಿರುವಾಗಲೇ ಪರಸ್ಪರ ಚುಂಬಿಸಿ ಸದ್ದು ಮಾಡಿದ್ದರು. ಆರಂಭದಲ್ಲಿ ದೀಪಿಕಾ ಕಿಂಗ್ ಫಿಷರ್ ಕ್ಯಾಲಂಡರ್‌ಗೆ ಮಾಡೆಲ್ ಆಗಿದ್ದರು. ಆ ವೇಳೆ ಸಿದ್ಧಾರ್ಥ್‌ನ ಪರಿಚಯವಾಗಿತ್ತು. ಬಳಿಕ ಇಬ್ಬರು ಜತೆಗೆ ಹಲವು ಕಡೆ ಸುತ್ತಾಡುತ್ತಾ ಗಾಸಿಪ್‌ಗೆ ಆಹಾರವಾಗಿದ್ದರು. ಅದಾಗ್ಯೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ಇದನ್ನೂ ಓದಿ IPL 2024 : ಕೊಹ್ಲಿಯನ್ನು ಹೊಗಳಿ ಆರ್ಸಿಬಿಗೆ ವಿದಾಯ ಹೇಳಿದ ವಿಜಯ್ ಮಲ್ಯ
ಬಳಿಕ ಕಾರಣಾಂತರಗಳಿಂದ ಈ ಜೋಡಿ ಬೇರ್ಪಟ್ಟಿತ್ತು. ದೀಪಿಕಾ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಬಳಿಕ ರಣವೀರ್ ಸಿಂಗ್ ಜತೆ ಸಪ್ತಪದಿ ತುಳಿದರು. ಇತ್ತ ಸಿದ್ಧಾರ್ಥ್ ತಂದೆ ಜತೆಗೆ ಲಂಡನ್‌ಗೆ ಹಾರಿ ಅಲ್ಲೇ ನೆಲೆಸಿದರು. ಬ್ರೇಕಪ್ ಆದ ಆರಂಭದಲ್ಲಿ ಸಿದ್ಧಾರ್ಥ್ ಸನ್ಯಾಸತ್ವ ಸ್ವೀಕರಿಸುತ್ತಾರೆ ಎಂಬೆಲ್ಲ ಸುದ್ದಿ ಹರಡಿದ್ದವು. ಲಂಡನ್‌ಗೆ ಪರಾರಿಯಾದ ಬಳಿಕ ಸಿದ್ದಾರ್ಥ್ ಮತ್ತು ಜಾಸ್ಮಿನ್ ಆತ್ಮೀಯರಾಗಿದ್ದರು.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ್ ಮಲ್ಯ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದರು. ಪದವಿ ಪಡೆದ ನಂತರ ಅವರು ಮಾಡೆಲ್ ಮತ್ತು ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಬ್ರಾಹ್ಮಣ ನಮನ್ (Brahman Naman), ಬೆಸ್ಟ್ ಫೇಕ್ ಫ್ರೆಂಡ್ಸ್ (Best Fake Friends) ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಭಿನಯದಿಂದ ದೂರ ಸರಿದಿದ್ದರು.