Site icon Vistara News

Simona Halep: ನಿಷೇಧ ಮುಕ್ತರಾದ ಹಾಲೆಪ್‌ ಮಿಯಾಮಿ ಓಪನ್​ನಲ್ಲಿ ಕಣಕ್ಕೆ

Simona Halep

ಬೂಖರೆಸ್ಟ್‌(ರೊಮೇನಿಯಾ): ಡೋಪಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ರೊಮೇನಿಯಾದ ಟೆನಿಸ್‌ ತಾರೆ, 2 ಗ್ರ್ಯಾನ್‌ ಸ್ಲಾಂ ವಿಜೇತೆ ಸಿಮೋನಾ ಹಾಲೆಪ್‌(Simona Halep) ಮತ್ತೆ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಸ್ಪರ್ಧಿಸಲು ಮುಕ್ತರಾಗಿದ್ದು ಇದೇ ತಿಂಗಳು ಆರಂಭಗೊಳ್ಳಲಿರುವ ಮಿಯಾಮಿ ಓಪನ್‌(Miami Open) ಟೆನಿಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸಿಮೊನಾ ಹಾಲೆಪ್ ಅವರಿಗೆ 2022ರ ಅಕ್ಟೋಬರ್‌ನಲ್ಲಿ 4 ವರ್ಷಗಳ ನಿಷೇಧ ಹೇರಿಲಾಗಿತ್ತು. ಇಂಟರ್‌ನ್ಯಾಷನಲ್‌ ಟೆನಿಸ್‌ ಇಂಟೆಗ್ರಿಟಿ ಏಜನ್ಸಿಯೂ ಅಂದು ಹಾಲೆಪ್‌ ನಿಷೇಧ ಶಿಕ್ಷೆಯನ್ನು ಪ್ರಕಟಿಸಿತ್ತು. ನಿಷೇಧ ಅವಧಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು. ಅವರ ಕೋರಿಕೆ ಮನ್ನಣೆ ನೀಡಿದ ನ್ಯಾಯಾಲಯ ನಿಷೇಧ ಅವಧಿಯನ್ನು 9 ತಿಂಗಳಿಗೆ ಇಳಿಕೆ ಮಾಡಿದೆ. 2023ರ ಜುಲೈ ವೇಳೆಗಾಗಲೇ 9 ತಿಂಗಳ ನಿಷೇಧ ಅವಧಿ ಮುಕ್ತಾಯಗೊಂಡಿದ್ದರಿಂದ ಸದ್ಯ ಹಾಲೆಪ್‌ ಸ್ಪರ್ಧಿಸಲು ಮುಕ್ತರಾಗಿದ್ದಾರೆ.

32 ವರ್ಷದ ಸಿಮೋನಾ ಹಾಲೆಪ್​ಗೆ ನಿಷೇಧ ಶಿಕ್ಷೆಯಿಂದಾಗಿ ಹಲವು ಟೂರ್ನಿಗಳು ಕೈ ತಪ್ಪಿ ಹೋಗಿತ್ತು. ಇದೀಗ ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಡುವ ಮೂಲಕ ತಮ್ಮ ಹಳೆಯ ಆಟಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಹಾಲೆಪ್​ “ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಮತ್ತೆ ನನ್ನ ನೆಚ್ಚಿನ ಟೆನಿಸ್​ ಕೋರ್ಟ್‌ಗೆ ಮರಳುವುದನ್ನು ಕಾಯಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ!” ಎಂದು ಬರೆದಿದ್ದಾರೆ. ಮಿಯಾಮಿ ಓಪನ್‌ ಟೂರ್ನಿ ಮಾರ್ಚ್​ 17ರಿಂದ 31ರ ತನಕ ನಡೆಯಲಿದೆ.

ಒಲಿಂಪಿಕ್ಸ್​ ಟೂರ್ನಿಯಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ ನಡಾಲ್​

ಪದೇ ಪದೇ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, ಸ್ಪೇನ್‌ನ ರಾಫೆಲ್ ನಡಾಲ್(Rafael Nadal)​ ಅವರು ಮತ್ತೆ ಟೆನಿಸ್​ ಕೋಟ್​​ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಪ್ರತಿಷ್ಠಿತ ಫ್ರೆಂಚ್​ ಓಪನ್​(French Open) ಮತ್ತು ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದೇನೆ ಎಂದು ಹೇಳಿದ್ದಾರೆ.

ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್​ನಿಂದ ದೂರ ಉಳಿದಿದ್ದ ನಡಾಲ್​ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್‌ ಇಂಟರ್‌ನ್ಶಾಶನಲ್‌ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದಿಂದ ಹಿಂದೆ ಸರಿದಿದ್ದರು. ಆದರೆ, ಫ್ರೆಂಚ್​ ಓಪನ್ ಆಡುವುದಾಗಿ ತಿಳಿಸಿದ್ದಾರೆ.

ನಿವೃತ್ತಿ ಘೋಷಿಸಲು ಬಯಸುವುದಿಲ್ಲ

37 ವರ್ಷದ ನಡಾಲ್ ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್​ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಆದರೆ ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ ಹೀಗಾಗಿ ಅವರು ಮುಂದಿನ ದಿನಗಳಲ್ಲಿ ವಿದಾಯ ಘೋಷಿಸಿದರೂ ಅಚ್ಚರಿಯಿಲ್ಲ.

Exit mobile version