Site icon Vistara News

Ind vs SA : ಎರಡನೇ ಟೆಸ್ಟ್​ನ ಮೊದಲ ದಿನ ಭಾರತ ತಂಡಕ್ಕೆ ಮುನ್ನಡೆ

Cricket news

ಕೇಪ್​ಟೌನ್​: ದಕ್ಷಿಣ ಆಫ್ರಿಕಾ ಪ್ರವಾಸದ (Ind vs SA) ಟೆಸ್ಟ್​ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದ ಮುಕ್ತಾಯಕ್ಕೆ ಭಾರತ ತಂಡ ಮುನ್ನಡೆ ಪಡೆದುಕೊಂಡಿದೆ ಏತನ್ಮಧ್ಯೆ, ದಿನಾಟದಲ್ಲಿ ಒಟ್ಟು 23 ವಿಕೆಟ್​ಗಳು ಉರುಳಿರುವುದು ಬೌನ್ಸಿ ಪಿಚ್​ನ ಕರಾಮತ್ತಿಗೆ ಸಾಕ್ಷಿ ಎನಿಸಿತು. ಉಭಯ ತಂಡಗಳ ವೇಗದ ಬೌಲರ್​ಗಳು ಮಿಂಚಿದರೆ ಬ್ಯಾಟರ್​ಗಳು ಬೌಲರ್​ಗಳ ವೇಗ ಮತ್ತು ಆವೇಗಕ್ಕೆ ಬೆಚ್ಚಿ ಬಿದ್ದರು.

ಇಲ್ಲಿನ ನ್ಯೂಲ್ಯಾಂಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್​ನಲ್ಲಿ 55 ರನ್​ಗಳಿಗೆ ಆಲ್​ಔಟ್ ಅಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 153 ರನ್​ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡ 62 ರನ್​ಗಳಿಗೆ 3 ವಿಕೆಟ್​ ನಷ್ಟ ಮಾಡಿಕೊಂಡಿದ್ದು ಇನ್ನೂ 36 ರನ್​ಗಳ ಹಿನ್ನಡೆಯನ್ನು ಹೊಂದಿದೆ.

ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್​

ವೇಗದ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ಹಾಗೂ ಮೊಹಮ್ಮದ್ ಸಿರಾಜ್ ನೆರವಿನಿಂದ ದಿನದ ಆರಂಭಿಕ ಸೆಷನ್​ನಲ್ಲಿ ಕ್ಷಿಣ ಆಫ್ರಿಕಾವನ್ನು ಕೇವಲ 55 ರನ್​ಗಳಿಗೆ ಆಲೌಟ್ ಮಾಡಿತು ಭಾರತ. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್​ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದ ಸ್ವಲ್ಪ ಸಮಯದ ನಂತರ, ಸಿರಾಜ್ ಆತಿಥೇಯರ ಅಗ್ರ ಕ್ರಮಾಂಕ ಬ್ಯಾಟರ್​ಗಳನ್ನು ಔಟ್​ ಮಾಡಿದರು. ಸಿರಾಜ್​ 15 ರನ್​ಗಳಿಗೆ 6 ವಿಕೆಟ್ ಪಡೆದರು. ಬುಮ್ರಾ ಮತ್ತು ಕುಮಾರ್ ದಕ್ಷಿಣ ಆಫ್ರಿಕಾದ ಉಳಿದ ನಾಲ್ಕು ವಿಕೆಟ್​ಗಳನ್ನು ಕಬಳಿಸಿದರು.

11 ಎಸೆತಗಳಲ್ಲಿ ಗತಿ ಬದಲಿಸಿದ ರಬಾಡ, ಎನ್​ಗಿಡಿ

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಡಕ್ ಔಟ್ ಆದ ನಂತರ ಭಾರತದ ನಾಯಕ ರೋಹಿತ್ ಶರ್ಮಾ ಮೊದಲ 10 ಓವರ್​ಗಳಲ್ಲಿ ತಮ್ಮ ಆಕ್ರಮಣಕಾರಿ ಆಟವಾಡಿದರು. ಅವರು 39 ರನ್​ ಬಾರಿಸಿದರು. ಅದರಲ್ಲಿ ಏಳು ಬೌಂಡರಿಗಳಿದ್ದವು. ಶುಬ್ಮನ್ ಗಿಲ್ (36) ಮತ್ತು ಬ್ಯಾಟಿಂಗ್ ಅನುಭವಿ ವಿರಾಟ್ ಕೊಹ್ಲಿ (46) ಕೂಡ ಪ್ರವಾಸಿ ತಂಡದ ಪರ ಎಚ್ಚರಿಕೆಯ ರನ್ ಗಳಿಸಿದರು.

ಭಾರತದ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕೂಡ ಡಕ್ ಔಟಾದರೆ, ಕೆಎಲ್ ರಾಹುಲ್​ 33 ಎಸೆತಗಳಲ್ಲಿ ಕೇವಲ ಎಂಟು ರನ್ ಗಳಿಸಿದರು. ಆದಕ್ಕೆ ಮೊದಲು 4 ವಿಕೆಟ್​ಗೆ 154 ರನ್ ಬಾರಿಸಿದ್ದ ಭಾರತ ಭರ್ಜರಿ ಮುನ್ನಡೆ ಸಾಧಿಸುವ ಸುಳಿವು ನೀಡಿತು. ಆದರೆ, ನಂತರ 11 ಎಸೆತಗಳ ಅಂತರದಲ್ಲಿ ತಮ್ಮ ಕೊನೆಯ ಆರು ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ಅದೇ ರನ್​ಗೆ ಸೀಮಿತಗೊಂಡಿತು.

ಕಗಿಸೊ ರಬಾಡ (3 ವಿಕೆಟ್​ 38 ರನ್​) ಮತ್ತು ಲುಂಗಿ ಎನ್​​ಗಿಡಿ (3 ವಿಕೆಟ್​ 30 ರನ್​) ಭಾರತದ ಬ್ಯಾಟರ್​​ಗಳ ಕುಸಿತಕ್ಕೆ ಕಾರಣರಾದರು. ನಾಂಡ್ರೆ ಬರ್ಗರ್ ಚಹಾ ವಿರಾಮದ ಮೊದಲು ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರ ಅಮೂಲ್ಯ ವಿಕೆಟ್​ ಸೇರಿದಂತೆ ಮೂರು ವಿಕೆಟ್​ ಉರುಳಿಸಿದರು.

ಇದನ್ನೂ ಓದಿ : Shubhman Gill : ಕಳಪೆ ರನ್​ ಹೊರತಾಗಿಯೂ ವಿಭಿನ್ನ ದಾಖಲೆ ಮಾಡಿದ ಗಿಲ್​

ಮುಕೇಶ್ ಕುಮಾರ್ ತಿರುಗೇಟು

ಎರಡನೇ ಇನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ತಮ್ಮ ವಿದಾಯ ಟೆಸ್ಟ್​​ನಲ್ಲಿ ಮುಖೇಶ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು. ಜಸ್ಪ್ರೀತ್ ಬುಮ್ರಾ ಟ್ರಿಸ್ಟಾನ್ ಸ್ಟಬ್ಸ್​ ವಿಕೆಟ್​ ಪಡೆಯುವ ಮೂಲಕ ಮುಕೇಶ್​ ಟೋನಿ ಡಿ ಜೊರ್ಜಿ ಅವರನ್ನು ಔಟ್ ಮಾಡಿದರು. ಐಡೆನ್ ಮಾರ್ಕ್ರಮ್ 36 ರನ್ ಗಳಿಸಿ ಔಟಾಗದೆ ಉಳಿದಿದ್ದು, ಡೇವಿಡ್ ಬೆಡಿಂಗ್ಹ್ಯಾಮ್ ಅವರೊಂದಿಗೆ ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

Exit mobile version