ಪಲ್ಲೆಕೆಲೆ: ಭಾರತ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಟಿ20 ಸರಣಿಗೆ ನಾಳೆ(ಶನಿವಾರ) ಅಧಿಕೃತ ಚಾಲನೆ ಸಿಗಲಿದೆ. ಪಲ್ಲೆಕೆಲೆ ಅಂತಾರಾಷ್ಟೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Pallekele International Cricket Stadium) ಮೊದಲ ಟಿ20 ಪಂದ್ಯ ನಡೆಯಲಿದೆ(SL vs IND 1st T20I). 2021ರ ಬಳಿಕ ಭಾರತ(Sri Lanka vs India) ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಆಡುತ್ತಿರುವ ದ್ವಿಪಕ್ಷೀಯ ಸರಣಿ ಇದಾಗಿದೆ. ಇತ್ತಂಡಗಳ ಟಿ20 ಮುಖಾಮುಖಿ, ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.
ಬಲಾಬಲ
ಭಾರತ ಮತ್ತು ಶ್ರೀಲಂಕಾ ತಂಡಗಳು(SL vs IND Head to Head in T20) ಇದುವರೆಗೂ ಒಟ್ಟು 19 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 19 ಪಂದ್ಯಗಳನ್ನು ಗೆದ್ದರೆ, ಶ್ರೀಲಂಕಾ 9 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಇತ್ತಂಡಗಳು ಕೊನೆಯ ಬಾರಿಗೆ ಟಿ20 ಪಂದ್ಯವನ್ನಾಡಿದ್ದು 2023ರಲ್ಲಿ. ಈ ಪಂದ್ಯದಲ್ಲಿ ಭಾರತ 91 ರನ್ ಅಂತರದ ಗೆಲುವು ಸಾಧಿಸಿತ್ತು.
ಮೊದಲ ಮುಖಾಮುಖಿ
ಉಭಯ ತಂಡಗಳು ಮೊದಲ ಬಾರಿಗೆ ಟಿ20 ಆಡಿದ್ದು 2009ರಲ್ಲಿ. ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೆಡಿಯಂನಲ್ಲಿ ನಡೆದ ಪಂದ್ಯ ಇದಾಗಿತ್ತು. ಇಲ್ಲಿ ಧೋನಿ ಪಡೆ 3 ವಿಕೆಟ್ಗಳ ಗೆಲುವು ಕಂಡಿತ್ತು. ಶ್ರೀಲಂಕಾ ತಂಡ ಭಾರತ ವಿರುದ್ಧ ಮೊದಲ ಟಿ20 ಗೆಲುವು ಸಾಧಿಸಿದ್ದು ಕೂಡ 2009ರಲ್ಲಿ. ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ. ಇಲ್ಲಿ ಲಂಕಾ ತಂಡ 29 ರನ್‌ಗಳ ಜಯ ಗಳಿಸಿತ್ತು. ಪ್ರಸ್ತುತ ಲಂಕಾ ತಂಡವನ್ನು ನೋಡುವಾಗ ಭಾರತ ಆರಾಮದಾಯಕವಾಗಿ ಈ ಸರಣಿ ಗೆಲ್ಲುವಂತಿದೆ.
ಪಿಚ್ ರಿಪೋರ್ಟ್
ಪಲ್ಲೆಕೆಲೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ 170 ರನ್‌ಗಳ ಗುರಿಯನ್ನು ದಾಟಿದರೆ ಮಾತ್ರ ಪಂದ್ಯದಲ್ಲಿ ಪೈಪೋಟಿ ನೀಡಬಹುದು. ಈ ಮೊತ್ತವನ್ನು ಇಲ್ಲಿ ಸ್ಪರ್ಧಾತ್ಮಕ ಮೊತ್ತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸುವ ತಂಡ ಆದಷ್ಟು ಬೃಹತ್ ಮೊತ್ತ ಬಾರಿಸರೆ ಉತ್ತಮ. ರಾತ್ರಿಯ ವೇಳೆ ಇಬ್ಬನಿಯ ಕಾಟ ಇರುವುದರಿಂದ ಚೇಸಿಂಗ್ ನಡೆಸಲು ಉತ್ತಮ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆಗೆ ಪ್ರಾಮುಖ್ಯತೆ ನೀಡಬಹುದು. ವೇಗಿಗಳಿಗಿಂತ ಇಲ್ಲಿ ಸ್ಪಿನ್ನ್ ಬೌಲರ್ಗಳು ಹೆಚ್ಚು ಪರಿಣಾಮ ಬೀರಬಹುದು.
ಇದನ್ನೂ ಓದಿ IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ
ಉಭಯ ಸಂಭಾವ್ಯ ತಂಡಗಳು
ಶ್ರೀಲಂಕಾ: ಅವಿಷ್ಕ ಫೆರ್ನಾಂಡೋ, ಚರಿತ್ ಅಸಲಂಕ (ನಾಯಕ), ದಿನೇಶ್ ಚಾಂಡಿಮಾಲ್, ಕುಸಲ್ ಮೆಂಡಿಸ್ (ವಿಕೀ), ಪಾತುಮ್ ನಿಸ್ಸಾಂಕ, ವನಿಂದು ಹಸರಂಗ, ದಸುನ್ ಶಾನಕ, ಮಥೀಶ ಪತಿರಣ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಬಿನೂರ ಫೆರ್ನಾಂಡೋ.
ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಬ್ ಪಂತ್ (ವಿಕೀ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.