ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 4 ರನ್ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿತು. ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಸ್ಮೃತಿ ಮಂಧಾನ(Smriti Mandhana) ಬೌಲಿಂಗ್ನಲ್ಲಿಯೂ ಒಂದು ವಿಕೆಟ್ ಕಿತ್ತು ಮಿಂಚಿದ್ದರು. ಸ್ಮೃತಿ ಅವರು ವಿರಾಟ್ ಕೊಹ್ಲಿಯ(Virat Kohli) ಶೈಲಿಯಲ್ಲೇ ಬೌಲಿಂಗ್ ನಡೆಸಿದ ವಿಡಿಯೊ ಮತ್ತು ಫೋಟೊಗಳು ಇದೀಗ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ನಡೆಸುತ್ತಿದ್ದ ವೇಳೆ ಗಾಯಗೊಂಡು ಪಂದ್ಯದಿಂದ ಹೊರಗುಳಿದಾಗ ವಿರಾಟ್ ಕೊಹ್ಲಿ ಅವರು ಈ ಓವರ್ ಪೂರ್ಣಗೊಳಿಸಿದ್ದರು. ಈ ವೇಳೆ ಕೊಹ್ಲಿ ನಡೆಸಿದ ಬೌಲಿಂಗ್ ಶೈಲಿಯಲ್ಲೇ ಇದೀಗ ಸ್ಮೃತಿ ಕೂಡ ಬೌಲಿಂಗ್ ನಡೆಸಿದ್ದಾರೆ. ಉಭಯ ಕ್ರಿಕೆಟರ್ಗಳ ಬೌಲಿಂಗ್ ಶೈಲಿಯ ಫೋಟೊವನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.
ವಿರಾಟ್ ಮತ್ತು ಸ್ಮೃತಿ ಐಪಿಎಲ್ನಲ್ಲಿ ಆರ್ಸಿಬಿ ಫ್ರಾಂಚೈಸಿ ಪರ ಆಡುತ್ತಿದ್ದಾರೆ. ಅಲ್ಲದೆ ಸ್ಮೃತಿ ಅವರು ಕೊಹ್ಲಿಯ ಅಪ್ಪಟ್ಟ ಅಭಿಮಾನಿ ಕೂಡ ಹೌದು. ಹಿಂದೊಮ್ಮೆ ಅವರು ಸಂದರ್ಶನಲ್ಲಿ ಕೊಹ್ಲಿ ನನ್ನ ಕ್ರಿಕೆಟ್ ಸ್ಫೂರ್ತಿ ಎಂದು ಹೇಳಿದ್ದರು. ಕೊಹ್ಲಿಯಂತೆ ಸ್ಮೃತಿ ಕೂಡ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಟಾರ್ ಆಟಗಾರ್ತಿಯಾಗಿದ್ದಾರೆ. ಜತೆಗೆ ಹಲವು ದಾಖಲೆಯನ್ನು ಕೂಡ ಹೊಂದಿದ್ದಾರೆ. ಶತಕ ಬಾರಿಸಿದಾಗಲೂ ಕೂಡ ಮಂಧಾನ ಅವರು ಕೊಹ್ಲಿಯಂತೆ ಮೇಲಕ್ಕೆ ಜಿಗಿದು ಸಂಭ್ರಮಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಮತ್ತು ದ್ವಿತೀಯ ಏಕದಿನ ಪಂದ್ಯದಲ್ಲಿಯೂ ಸ್ಮೃತಿ ಶತಕ ಬಾರಿಸಿ ಮಿಂಚಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ 2 ಓವರ್ ಎಸೆದ ಮಂಧಾನ 13 ರನ್ಗೆ ಒಂದು ವಿಕೆಟ್ ಕಿತ್ತರು. ಪ್ರಚಂಡ ಬ್ಯಾಟಿಂಗ್ ನಡೆಸಿದ ಅವರು 136 ರನ್ ಬಾರಿಸಿದರು. ಒಟ್ಟು 4 ಶತಕಗಳು ಈ ಪಂದ್ಯದಲ್ಲಿ ದಾಖಲಾಯಿತು. ಭಾರತ ಪರ ಹರ್ಮನ್ಪ್ರೀತ್ ಮತ್ತು ಮಂಧಾನ ಶತಕ ಬಾರಿಸಿದರೆ ದಕ್ಷಿಣ ಆಫ್ರಿಕಾ ಪರ ನಾಯಕಿ ಲಾರಾ ವೋಲ್ವಾರ್ಟ್ ಮತ್ತು ಮರಿಜಾನ್ ಕಾಪ್ ಶತಕ ಬಾರಿಸಿದರು. ಆದರೆ ಪಂದ್ಯವನ್ನು ಕೇವಲ 4 ರನ್ ಅಂತರದಿಂದ ಕಳೆದುಕೊಂಡರು.
ದಾಖಲೆ ಬರೆದ ಸ್ಮೃತಿ
ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸತತ 2 ಏಕದಿನ ಪಂದ್ಯಗಳಲ್ಲಿ ಸೆಂಚುರಿ ಹೊಡೆದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಜತೆಗೆ 7ನೇ ಶತಕ ಪೂರ್ತಿಗೊಳಿಸಿ ಮಿಥಾಲಿ ರಾಜ್(7) ಜತೆ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 3 ವಿಕೆಟಿಗೆ 325 ರನ್ ಬಾರಿಸಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 321 ರನ್ ಮಾಡಿ ಶರಣಾಯಿತು. ಸರಣಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ