ಮುಂಬಯಿ: ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ದಾದಾ ಖ್ಯಾತಿಯ ಸೌರವ್ ಗಂಗೂಲಿ(Sourav Ganguly) ಅವರು ಭವಿಷ್ಯದ ಟೀಮ್ ಇಂಡಿಯಾದ ನಾಯಕನೆಂದೇ ಪರಿಗಣಿಸಲ್ಪಟ್ಟ ಹಾರ್ದಿಕ್ ಪಾಂಡ್ಯ(Hardik Pandya) ಅವರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪಾಂಡ್ಯ ಅವರು ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳುವಂತೆ ಕೇಳಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಭವಿಷ್ಯದ ಬಗೆಗಿನ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಗಂಗೂಲಿ, ಎಲ್ಲ ಕಂಡೀಷನ್ನಲ್ಲಿಯೂ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವುಳ್ಳ ಇರುವ ಹಾರ್ದಿಕ್ ಪಾಂಡ್ಯ ಕೇವಲ ಸೀಮಿತ ಓವರ್ನ ಕ್ರಿಕೆಟ್ಗೆ ಸೀಮಿತವಾಗಬಾರದು ಅವರೂ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನನ್ನ ಮನವಿಯಂತೆ ಮುಂದಿನ ದಿನಗಳಲ್ಲಿ ಪಾಂಡ್ಯ ಟೆಸ್ಟ್ ಕ್ರಿಕೆಟ್ ಆಡುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.
ಇದೇ ವೇಳೆ ಟೆಸ್ಟ್ ವಿಶ್ವ ಕಪ್ನಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸಲು ವಿಫಲವಾಗಿ ಟೀಕೆಗೆ ಗುರಿಯಾದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ಅವರ ಪರ ಗಂಗೂಲಿ ಬ್ಯಾಟ್ ಬೀಸಿದ್ದಾರೆ. “ಕೇವಲ ಒಂದು ಪಂದ್ಯದ ಸೋಲಿನಿಂದ ಆಟಗಾರರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳಿವೆ. ಒಂದು ವೈಫಲ್ಯವನ್ನು ಮುಂದಿಟ್ಟುಕೊಂಡು ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಅವರನ್ನು ದೂರುವುದು ಸರಿಯಲ್ಲ” ಎಂದಿದ್ದಾರೆ.
ಇದನ್ನೂ ಓದಿ Team India : ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಹಿರಂಗಪಡಿಸಿದ ಸೌರವ್ ಗಂಗೂಲಿ!
ಐಪಿಎಲ್ ಪ್ರದರ್ಶನವನ್ನು ಕಡೆಗಣಿಸಿ
ಮಹತ್ವದ ಪಂದ್ಯಗಳನ್ನು ಆಡುವಾಗ ಐಪಿಎಲ್ ಪ್ರದರ್ಶನ ಕಂಡು ತಂಡವನ್ನು ರಚಿಸುವುದು ಮೂರ್ಖತನ. ಈ ಪದ್ಧತಿಯನ್ನು ಮೊದಲು ಕೈ ಬಿಡಬೇಕು. ಏಕೆಂದರೆ ದೇಶಿ ಕ್ರಿಕೆಟ್‌ನಲ್ಲಿ ಕೆಲ ಅದ್ಭುತ ಆಟಗಾರರು ಇದ್ದಾರೆ ಹಾಗೂ ಅವರಿಗೆ ನೀವು ಅವಕಾಶ ನೀಡಿದಾಗ ಮಾತ್ರ ಅವರಲ್ಲಿನ ಸಾಮರ್ಥ್ಯವನ್ನು ಪತ್ತೆ ಮಾಡಬಹುದು. ತಂಡಕ್ಕೆ ಬೇಕಿರುವುದು ಇನಿಂಗ್ಸ್ ಕಟ್ಟಬಲ್ಲ ಆಟಗಾರರಾಗಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಜತೆಯಾಟ ಎನ್ನುವುದು ಬಹಳ ಮುಖ್ಯವಾಗಿದೆ. ಇದುವೇ ತಂಡದ ಫಲಿತಾಂಶದಲ್ಲಿ ಮಹತ್ವದ ಪಾತ್ರವಹಿಸುವುದಾಗಿದೆ. ಹೀಗಾಗಿ ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಆಯ್ಕೆ ಮಾಡಿ ಅವರನ್ನು ದೀರ್ಘ ಕಾಲದ ಕ್ರಿಕೆಟ್ಗೆ ಸಿದ್ಧಪಡಿಸಿದರೆ ಉತ್ತಮ ಎಂದು ಗಂಗೂಲಿ ಬಿಸಿಸಿಐಗೆ ಉತ್ತಮ ಸಲಹೆ ನೀಡಿದ್ದಾರೆ.