ಮುಂಬಯಿ: ಐಪಿಎಲ್ 16ನೇ ಆವೃತ್ತಿಯ ಆರಂಭಕ್ಕೆ (IPL 2023) ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಹೀಗಾಗಿ ನಿಧಾನವಾಗಿ ಅದರ ಕುರಿತು ಚರ್ಚೆಗಳು ಆರಂಭಗೊಂಡಿವೆ. ಐಪಿಎಲ್ ನೇರ ಪ್ರಸಾರದ ಹಕ್ಕನ್ನು ಪಡೆದಕೊಂಡಿರುವ ಸ್ಟಾರ್ ಸ್ಪೋರ್ಟ್ಸ್ ಕೂಡ ಈ ಹಿನ್ನೆಲೆಯಲ್ಲಿ ಚರ್ಚೆಗಳನ್ನು ನಡೆಸಲು ಆರಂಭಿಸಿದೆ. ಫ್ರಾಂಚೈಸಿಗಳು ಆಟಗಾರರ ಜತೆಗಿನ ಪಾಡ್ಕಾಸ್ಟ್ಗಳನ್ನು ಪ್ರಕಟಿಸುತ್ತಿವೆ. ಇಂಥದ್ದೇ ಒಂದು ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly), ಐಪಿಎಲ್ನಲ್ಲಿ ಉತ್ತಮ ಭವಿಷ್ಯ ಕಾಣಲಿರುವ ಐವರು ಕಿರಿಯ ಆಟಗಾರರನ್ನು ಗುರುತಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ ಹಾಗೂ ಪೃಥ್ವಿ ಶಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಋತುರಾಜ್ ಗಾಯಕ್ವಾಡ್, ಗುಜರಾತ್ ಟೈಟನ್ಸ್ ತಂಡದ ಶುಭ್ಮನ್ ಗಿಲ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಬಳಗದ ಉಮ್ರಾನ್ ಮಲಿಕ್ ಯುವ ಆಟಗಾರರು. ಇವೆರಲ್ಲರೂ ಮುಂದಿನ ಐದು ವರ್ಷಗಳ ಕಾಲ ಐಪಿಎಲ್ನಲ್ಲಿ ತಮ್ಮ ಛಾಪು ಮೂಡಿಸಲಿದ್ದಾರೆ ಎಂಬುದಾಗಿ ಗಂಗೂಲಿ ಭವಿಷ್ಯ ನುಡಿದಿದ್ದಾರೆ.
ಈ ಐವರ ಜತೆಗೆ ಸೂರ್ಯಕುಮಾರ್ ಅವರನ್ನೂ ಗಂಗೂಲಿ ಉತ್ತಮ ಆಟಗಾರರ ಪಟ್ಟಿಗೆ ಪರಿಗಣಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಯಾರೂ ಯುವ ಆಟಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಅವರು ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ ಎಂಬುದಾಗಿ 50 ವರ್ಷದ ಗಂಗೂಲಿ ಹೇಳಿದ್ದಾರೆ.