ಕೋಲ್ಕತಾ: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಮೇಲ್ದರ್ಜೆಗೆ ಏರಿಸಿದೆ. ದಾದಾ ಅವರಿಗೆ ಇದುವರೆಗೆ ಸರ್ಕಾರದಿಂದ ‘ವೈ’ ಕೆಟಗರಿ ಭದ್ರತೆ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ‘ಝೆಡ್’ ಕೆಟಗರಿ ಭದ್ರತೆ ಸಿಗಲಿದೆ.
ಮೂಲಗಳ ಪ್ರಕಾರ, ಸೌರವ್ ಗಂಗೂಲಿ ಅವರೇ ವೈಯಕ್ತಿಕ ಕಾರಣಗಳಿಗಾಗಿ ಭದ್ರತೆ ಹೆಚ್ಚಿಸಲು ಬಯಸಿದ್ದರಂತೆ. ಹಾಗಾಗಿ ವೈ ಯಿಂದ ಝೆಡ್ ಕೆಟಗರಿ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಸೌರವ್ ಗಂಗೂಲಿ ಜತೆಗೆ 2 ವಿಶೇಷ ಭದ್ರತಾ ಅಧಿಕಾರಿಗಳು ಅವರ ನಿವಾಸ ಮತ್ತು ಅವರು ಹೋದಲ್ಲೆಲ್ಲ ಇರಲಿದ್ದಾರೆ. ಬೆಂಗಾವಲು ಕಾರು, ಮನೆಯ ಭದ್ರತೆಯನ್ನು 24 ಗಂಟೆಗಳ ಕಾಲ ಹೆಚ್ಚಿಸಲಾಗಿದೆ.
ಸೌರವ್ ಗಂಗೂಲಿ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಟೂರ್ನಿ ಮುಗಿದ ಬಳಿಕ ದಾದಾ ಅವರು ಕೋಲ್ಕತ್ತಾಗೆ ಮರಳಲಿದ್ದಾರೆ. ಅವರು ಮರಳಿದ ತಕ್ಷಣ ಅವರಿಗೆ ಝೆಡ್ ಕೆಟಗರಿ ಭದ್ರತೆ ಸಿಗಲಿದೆ. ಡೆಲ್ಲಿ ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಇದನ್ನೂ ಓದಿ IPL 2023: ಮುಂಬಯಿ ಇಂಡಿಯನ್ಸ್ ವಿರುದ್ಧ ಲಕ್ನೊ ತಂಡ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಈ ರೀತಿ ಇದೆ
ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಸೌರವ್ ಗಂಗೂಲಿ ಮತ್ತು ಈಗಿನ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮಧ್ಯೆ ಎಲ್ಲವೂ ಸರಿ ಇಲ್ಲ. ಕಳೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗಂಗೂಲಿ ಅವರು ಬಿಜೆಪಿ ಪರ ಚುನಾವಣ ಪ್ರಚಾರ ಮಾಡಲು ಒಪ್ಪದ ಕಾರಣ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಜೈ ಶಾ ಒಪ್ಪಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಗಂಗೂಲಿ ಅವರು ಕೆಳಗಿಳಿದಿದ್ದಾಗ ಸಿಎಂ ಮಮತಾ ಬ್ಯಾನರ್ಜಿ ಅವರು ದಾದಾ ಪರ ಬ್ಯಾಟ್ ಬೀಸಿದ್ದರು. ಕ್ರೀಡೆಯಲ್ಲಿ ರಾಜಕೀಯ ಮಾಡಬಾರದು. ಗಂಗೂಲಿ ಅವರು ಚುನಾವಣ ಪ್ರಚಾರಕ್ಕೆ ನಿಮಗೆ ಬೆಂಬಲ ನೀಡಲಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸದ ಕ್ರಮಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.