ಲಕ್ನೋ: ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ(Australia vs South Africa) ತಂಡ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 134 ರನ್ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಲಂಕಾ ವಿರುದ್ಧ ದಾಖಲೆಯ ಮೊತ್ತದ ಗೆಲುವು ಸಾಧಿಸಿತ್ತು. ಆಸೀಸ್ ವಿರುದ್ಧದ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ. 2ನೇ ಸ್ಥಾನದಲ್ಲಿದ್ದ ಭಾರತ ಮೂರನೇ ಸ್ಥಾನಕ್ಕೆ ಕುಸಿಯಿತು.
ಇಲ್ಲಿನ ಅಟಲ್‌ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೂತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ ಕಾಕ್ ಅವರ ಶತಕ ಮತ್ತು ಐಡೆನ್ ಮಾರ್ಕ್ರಮ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 311 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಬೆದರಿದ ಆಸೀಸ್ 40.5 ಓವರ್ಗಳಲ್ಲಿ 177 ರನ್ಗೆ ಸರ್ವಪತನ ಕಂಡಿತು. ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾಕ್ಕೆ ಎದುರಾದ ಅತಿ ದೊಡ್ಡ ಮೊತ್ತದ ಸೋಲು ಇದಾಗಿದೆ. ದಕ್ಷಿಣ ಆಫ್ರಿಕಾ ಪರ ಫಾತಕ ಸ್ಫೆಲ್ ನಡೆಸಿದ ಕಗಿಸೊ ರಬಾಡ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶತಕ ವೀರ ಡಿ ಕಾಕ್ ಪಂದ್ಯಶೇಷ್ಠ ಪ್ರಶಸ್ತಿಗೆ ಭಾಜನರಾದರು.
ಡಿ ಕಾಕ್ ಶತಕ ವೈಭವ
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಪರ ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಸೊಗಸಾದ ಬ್ಯಾಟಿಂಗ್ ನಡೆಸಿ ಶತಕವನ್ನು ಬಾರಿಸಿದರು. ಇದು ಅವರ ಸತತ ಎರಡನೇ ಶತಕವಾಗಿದೆ. ಮೊದಲ ಪಂದ್ಯದಲ್ಲಿ ಲಂಕಾ ವಿರುದ್ಧ ಶತಕ ಬಾರಿಸಿದ್ದರು. ಆಸೀಸ್ ಬೌಲರ್ಗಳಿಗೆ ಆರಂಭದಿಂದಲೇ ಬೆಂಡೆತ್ತಿದ ಡಿ ಕಾಕ್ 5 ಆಕರ್ಷಕ ಸಿಕ್ಸರ್ ಮತ್ತು 8 ಬೌಂಡರಿ ಸಿಡಿಸಿ 106 ಎಸೆತಗಳಿಂದ 109 ರನ್ ಗಳಿಸಿದರು. ಮ್ಯಾಕ್ಸ್ವೆಲ್ ಅವರು ಡಿ ಕಾಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ದಕ್ಷಿಣ ಆಫ್ರಿಕಾ ಪರ ವಿಶ್ವಕಪ್ನಲ್ಲಿ ಅತ್ಯಧಿಕ ಶತಕ ಸಾಧಕರ ಪಟ್ಟಿಯಲ್ಲಿ ಡಿ ಕಾಕ್ ಹರ್ಷಲ್ ಗಿಪ್ಸ್, ಫಾಫ್ ಡು ಪ್ಲೆಸಿಸ್ ಮತ್ತು ಹಾಸಿಂ ಆಮ್ಲ ಅವರ ದಾಖಲೆಯನ್ನು ಸರಿಗಟ್ಟಿದರು. ಎಲ್ಲರು ತಲಾ 2 ಶತಕ ಬಾರಿಸಿದ್ದಾರೆ. 4 ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್ ಅಗ್ರಸ್ಥಾನ ಪಡೆದಿದ್ದಾರೆ.
ಬ್ಯಾಟಿಂಗ್ ಮರೆತ ಆಸೀಸ್
ಆಸ್ಟ್ರೇಲಿಯಾದ ಬಲಿಷ್ಠ ಆಟಗಾರರು ಈ ಪಂದ್ಯದಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿದರು. ಘಾಟಾನುಘಟಿಗಳಾದ ಡೇವಿಡ್ ವಾರ್ನರ್(13) ಮಿಚೆಲ್ ಮಾರ್ಷ್(7), ಸ್ಟೀವನ್ ಸ್ಮಿತ್(19), ಜೋಶ್ ಇಂಗ್ಲೀಷ್(5), ಗ್ಲೆನ್ ಮ್ಯಾಕ್ಸ್ವೆಲ್(3), ಮಾರ್ಕಸ್ ಸ್ಟೋಯಿನಿಸ್(5) ಅಗ್ಗಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಕಗಿಸೊ ರಬಾಡ ಬೌಲಿಂಗ್ ದಾಳಿಗೆ ಬೆಚ್ಚಿ ಬಿದ್ದ ಆಸೀಸ್ ಆಟಗಾರರು ಪ್ರತಿ ರನ್ಗೂ ಪರದಾಡಿದರು. ಅಷ್ಟರ ಮಟ್ಟಿಗೆ ಫಾತಕವಾಗಿತ್ತು ಅವರ ಬೌಲಿಂಗ್. ಇವರಿಗೆ ಮಾರ್ಕೊ ಜಾನ್ಸನ್ ಕೂಡ ಉತ್ತಮ ಸಾಥ್ ನೀಡಿದರು. ಅವರು ಕೂಡ 2 ವಿಕೆಟ್ ಬೇಟೆಯಾಡುವಲ್ಲಿ ಯುಶಸ್ಸು ಕಂಡರು. ಮೊದಲ ವಿಕೆಟ್ ಇವರೇ ಕಿತ್ತರು.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಕಂಚಿನ ಕಂಠದ ಕಾಮೆಂಟರಿ ಕಿಂಗ್ ಅಲಭ್ಯ
ಮಾನ ಉಳಿಸಿದ ಲಬುಶೇನ್
ಒಂದೆಡೆ ವಿಕೆಟ್ಗಳು ತರಗೆಳೆಯಂತೆ ಉದುರುತ್ತಿರುವುದನ್ನು ಕಂಡಾಗ ಆಸೀಸ್ 100ರ ಒಳಗೆ ಗಂಟು ಮೂಟೆ ಕಟ್ಟುತ್ತದೆ ಎಂದು ಊಹಿಸಲಾಗಿತ್ತು. ಆದರೆ ಮಾರ್ನಸ್ ಲಬುಶೇನ್ ಏಕಾಂಗಿಯಾಗಿ ನಿಂತು ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟ ನಡೆಸಿ ಪಾತಾಳಕ್ಕೆ ಕುಸಿದಿದ್ದ ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. 46 ರನ್ಗಳಿಸಿ ಮಹರಾಜ ಅವರ ಓವರ್ನಲ್ಲಿ ವಿಕೆಟ್ ಕೈಚೆಲ್ಲಿದರು. ಅಂತಿಮ ಹಂತದಲ್ಲಿ ಮಿಚೆಲ್ ಸ್ಟಾರ್ಕ್ (27) ಮತ್ತು ನಾಯಕ ಪ್ಯಾಟ್ ಕಮಿನ್ಸ್(22) ಶಕ್ತಿ ಮೀರಿ ಪ್ರಯತ್ನಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಆದರೆ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು. ಈ ಮೂವರು ಆಟಗಾರರೇ ಆಸೀಸ್ ಪರ ಅತ್ಯಧಿಕ ಮೊತ್ತ ಪೇರಿಸಿದ ಆಟಗಾರರು. ಉಳಿದೆಲ್ಲರು ವಿಫಲರಾದರು. ಕ್ಯಾಮರೂನ್ ಗ್ರೀನ್ ಬದಲಿಗೆ ಆಡಲಿಳಿದ ಮಾರ್ಕಸ್ ಸ್ಟೋಯಿನಿಸ್ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ತೋರಿದರು. ಜತೆಗೆ ಒಂದು ಕ್ಯಾಚ್ ಕೂಡ ಕೈಚೆಲ್ಲಿದರು.
ದಕ್ಷಿಣ ಆಫ್ರಿಕಾ ಪರ ಎಲ್ಲರೂ ಉತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿದರು. ನಾಯಕ ಟೆಂಬ ಬವುಮಾ(35), ರಸ್ಸಿ ವಾನ್ ಡರ್ ಡುಸ್ಸೆನ್(26), ಕ್ಲಾಸೆನ್(29), ಡೇವಿಡ್ ಮಿಲ್ಲರ್ (17) ಮತ್ತು ಮಾರ್ಕೊ ಜಾನ್ಸೆನ್(26) ರನ್ ಗಳಿಸಿ ತಂಡದ ಬೃಹತ್ ಮೊತಕ್ಕೆ ಸಹಕರಿಸಿದರು. ಆಸೀಸ್ ಪರ ಬೌಲಿಂಗ್ನಲ್ಲಿ ಮಿಂಚಿದವರೆಂದರೆ ಸ್ಟಾರ್ಕ್ ಮತ್ತು ಮ್ಯಾಕ್ಸ್ವೆಲ್. ಉಭಯ ಆಟಗಾರರು ತಲಾ 2 ವಿಕೆಟ್ ಪಡೆದರು. ಪ್ರಧಾನ ಸ್ಪಿನ್ನರ್ ಆ್ಯಡಂ ಜಾಂಪ 70 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಪಡೆದದ್ದು ಒಂದು ವಿಕೆಟ್ ಮಾತ್ರ.