ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ (IPL 2023) ಪಂದ್ಯದಲ್ಲಿ ಹೀನಾಯ ಸೋಲಿಗೆ ಒಳಗಾಗುವ ಜತೆಗೆ ಬೇಸರ ಸುದ್ದಿಯನ್ನೂ ಪಡೆದುಕೊಂಡಿತ್ತು. ಕಳೆದ ಹರಾಜಿನಲ್ಲಿ 1.9 ಕೋಟಿ ರೂಪಾಯಿ ಪಡೆದುಕೊಂಡು ಆರ್ಸಿಬಿ ಬೌಲಿಂಗ್ ವಿಭಾಗ ಸೇರಿಕೊಂಡಿದ್ದ ಇಂಗ್ಲೆಂಡ್ನ ವೇಗಿ ರೀಸ್ ಟೋಪ್ಲೆ ಗಾಯದ ಸಮಸ್ಯೆಯಿಂದ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿರುವುದು. ಮುಂಬಯಿ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಟೋಪ್ಲೆ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಅವರ ಬಲಗೈ ಭುಜದ ಮೂಳೆ ಕಳಚಿಕೊಂಡಿತ್ತು. ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡಿದರೂ ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಂಗ್ಲೆಂಡ್ಗೆ ವಾಪಸಾಗಿದ್ದಾರೆ.
ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯ ಬೌಲಿಂಗ್ ದೌರ್ಬಲ್ಯ ಅನಾವಣಗೊಂಡಿತ್ತು. ಡೆತ್ ಓವರ್ಗಳಲ್ಲಿ ರನ್ ನಿಯಂತ್ರಣ ಮಾಡಲು ಸಾಧ್ಯವಾಗದೇ ಎದುರಾಳಿ ತಂಡಕ್ಕೆ ಕನಿಷ್ಠ 30 ಹೆಚ್ಚುವರಿ ರನ್ಗಳನ್ನು ನೀಡಿದ್ದರು. ಇದೇ ಸಂದರ್ಭದಲ್ಲಿ ಟೋಪ್ಲೆ ಗಾಯದ ಸಮಸ್ಯೆಯಿಂದ ಮರಳಿದ ಸುದ್ದಿಯೂ ಬಂದಿತ್ತು. ಹೀಗಾಗಿ ಆರ್ಸಿಬಿ ಅಭಿಮಾನಿಗಳ ಚಿಂತೆ ಹಚ್ಚಾಗಿತ್ತು. ಆದರೆ ಈ ಕೊರಗು ನೀಗಿಸುವ ಸುದ್ದಿಯೊಂದು ಇದೀಗ ಬಂದಿದ್ದು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವೇಯ್ಸ್ ಪಾರ್ನೆಲ್ ಆರ್ಸಿಬಿ ಬಳಗ ಸೇರಿಕೊಂಡಿದ್ದಾರೆ.
ಟೋಪ್ಲೆ ಜಾಗವನ್ನು ತುಂಬಲಿರುವ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಈ ಹಿಂದೆಯೂ ಐಪಿಎಲ್ ಆಡಿದ್ದರು. ಆದರೆ, ಹಾಲಿ ಆವೃತ್ತಿಯ ಐಪಿಎಲ್ನ ಹರಾಜಿನಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಟೋಪ್ಲೆ ಜಾಗವನ್ನು ಭರ್ತಿ ಮಾಡುವ ಅವಕಾಶ ದೊರಕಿದೆ. ಪುಣೆ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಐಪಿಎಲ್ನಲ್ಲಿ ಆಡಿದ್ದ ವೇಯ್ನ್ ಪಾರ್ನೆಲ್ ಅವರು 26 ಪಂದ್ಯಗಳಲ್ಲಿ 26 ವಿಕೆಟ್ಗಳನ್ನು ಕಿತ್ತಿದ್ದಾರೆ. 27 ರನ್ಗಳ ವೆಚ್ಚದಲ್ಲಿ 3 ವಿಕೆಟ್ ಪಡೆದಿರುವುದು ಐಪಿಎಲ್ನ ಅತ್ಯುತ್ತಮ ಸಾಧನೆಯಾಗಿದೆ.
ವೇಯ್ನ್ ಪಾರ್ನೆಲ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರವಾಗಿ ಒಟ್ಟು 56 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಷ್ಟು ಇನಿಂಗ್ಸ್ಗಳಲ್ಲಿ ಅವರು 59 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಚುಟುಕ ಕ್ರಿಕೆಟ್ಗೆ ಸೂಕ್ತ ಬೌಲರ್ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.
ಇದೇ ವೇಳೆ ಕರ್ನಾಟಕ ರಣಜಿ ತಂಡದ ವೇಗದ ಬೌಳರ್ ವೈಶಾಕ್ ವಿಜಯ್ ಕುಮಾರ್ ಕೂಡ ಆರ್ಸಿಬಿ ತಂಡ ಸೇರಿಕೊಂಡಿದ್ದಾರೆ. ಅವರು ಗಾಯಗೊಂಡಿರುವ ರಜತ್ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ.
ಆರ್ಸಿಬಿ ತಂಡ ಟೂರ್ನಿ ಆರಂಭಕ್ಕೆ ಮೊದಲು ಆಲ್ರೌಂಡರ್ ವಿಲ್ ಜಾಕ್ಸ್ ಅವರ ಸೇವೆ ಕಳೆದುಕೊಂಡಿದ್ದರು. ಸರ್ಜರಿಗೆ ಒಳಗಾಗಿರುವ ಅವರ ಬದಲಿಗೆ ಮೈಕೆಲ್ ಬ್ರೇಸ್ವೆಲ್ ತಂಡ ಸೇರಿಕೊಂಡಿದ್ದಾರೆ. ಅವರ ಬಳಿಕ ರಜತ್ ಪಾಟೀದಾರ್ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡರು. ಅವರು ಪಾದದ ನೋವಿನಿಂದ ಸುಧಾರಿಸಿಕೊಂಡಿಲ್ಲ.
ಪಾಟೀದಾರ್ ಯಾಕೆ ಆಡುತ್ತಿಲ್ಲ?
ತಂಡದ ಪ್ರಮುಖ ಬ್ಯಾಟರ್ ಹಾಗೂ ಕಳೆದ ಆವೃತ್ತಿಯಲ್ಲಿ ಶತಕ ಬಾರಿಸಿ ಮಿಂಚಿದ್ದ ರಜತ್ ಪಾಟೀದಾರ್ ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಐಪಿಎಲ್ ಟೂರ್ನಿಯಿಂದ (IPL 2023) ಸಂಪೂರ್ಣವಾಗಿ ಹೊರಕ್ಕೆ ನಡೆದಿದ್ದಾರೆ. ಈ ಮೂಲಕ ಆರ್ಸಿಬಿಯ ಗಾಯದ ಪಟ್ಟಿಗೆ ಇನ್ನೊಬ್ಬ ಆಟಗಾರ ಸೇರ್ಪಡೆಗೊಂಡಿದ್ದಾರೆ.
ರಜತ್ ಪಾಟೀದಾರ್ ಆರ್ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ ಬಲ ಎನಿಸಿಕೊಂಡಿದ್ದರು. ಆದರೆ, ಟೂರ್ನಿ ಆರಂಭಕ್ಕೆ ಮೊದಲೇ ಪಾದದ ನೋವಿಗೆ ಒಳಗಾಗಿದ್ದ ಅವರು ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಪೂರ್ತಿ ಟೂರ್ನಿಯಿಂದ ಹೊರಕ್ಕೆ ನಡೆಯುವಂತಾಗಿದೆ. ಆರ್ಸಿಬಿ ಫ್ರಾಂಚೈಸಿ ಮಂಗಳವಾರ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ, ಅವರ ಜಾಗಕ್ಕೆ ಯಾವ ಆಟಗಾರ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿಸಿಲ್ಲ.
ದುರದೃಷ್ಟವಶಾತ್ ರಜತ್ಪಾಟೀದಾದ್ ಐಪಿಎಲ್ 2023ನೇ ಆವೃತ್ತಿಯಿಂದ ಹೊರಕ್ಕೆ ಉಳಿದಿದ್ದಾರೆ. ಅವರಿಗೆ ಆಗಿರುವ ಪಾದದ ನೋವು ಇನ್ನೂ ಕಡಿಮೆಯಾಗಿಲ್ಲ. ಅವರು ವೇಗವಾಗಿ ಗುಣಮುಖರಾಗಲಿ ಎಂದು ನಾನು ಬಯಸುತ್ತೇವೆ ಹಾಗೂ ಈ ಪ್ರಕ್ರಿಯೆಯಲ್ಲಿ ನಮ್ಮ ಬೆಂಬಲ ಅವರಿಗೆ ಇದೆ. ಕೋಚ್ಗಳು ಹಾಗೂ ಮ್ಯಾನೇಜ್ಮೆಂಟ್ ಅವರ ಜಾಗಕ್ಕೆ ಇನ್ನೊಬ್ಬ ಆಟಗಾರನ್ನು ಹೆಸರಿಸದೇ ಇರಲು ನಿರ್ಧರಿಸಿದ್ದೇವೆ, ಎಂದು ಆರ್ಸಿಬಿ ಹೇಳಿಕೆ ಪ್ರಕಟಿಸಿದೆ.
ಈ ಹಿಂದೆ ರಜತ್ಪಾಟೀದಾರ್ ಐಪಿಎಲ್ನ ಅರ್ಧ ಪಂದ್ಯಗಳು ಮುಕ್ತಾಯಗೊಂಡ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರು ಸಂಪೂರ್ಣ ಟೂರ್ನಿಯಿಂದ ಹೊರಕ್ಕುಳಿದ ಸುದ್ದಿ ಬಂದಿದೆ. ರಜತ್ ಪಾಟೀದಾರ್ ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಆರ್ಸಿಬಿ ಫ್ರಾಂಚೈಸಿ ಅವರನ್ನು ಈ ಬಾರಿಯೂ ಉಳಿಸಿಕೊಂಡಿತ್ತು.
ಮಧ್ಯಪ್ರದೇಶದ 29 ವರ್ಷದ ಆಟಗಾರ 2021ರಲ್ಲಿ ಚೆನ್ನೈನಲ್ಲಿ ನಡೆದ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 12 ಪಂದ್ಯಗಳಲ್ಲಿ ಪಾಳ್ಗೊಂಡಿರುವ ಸರಾಸರಿ 40ರಂತೆ 404 ರನ್ ಬಾರಿಸಿದ್ದಾರೆ.