ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ೨೦ ಸರಣಿಯ ಕೊನೆಯ ಪಂದ್ಯ ಮಳೆಯ ಕಾರಣದಿಂದ ವಿಳಂಬವಾಗಿ ಆರಂಭಗೊಂಡು ಮತ್ತೆ ಸ್ಥಗಿತಗೊಂಡಿದೆ.
ಮಳೆಯ ಕಾರಣದಿಂದ ೫೦ ನಿಮಿಷ ತಡವಾಗಿ ಪಂದ್ಯ ಆರಂಭಗೊಂಡಿದ್ದರಿಂದ ೨೦ ಓವರ್‌ಗೆ ಬದಲಾಗಿ ೧೯ ಓವರ್‌ಗಳ ಪಂದ್ಯ ನಿಗದಿಯಾಗಿತ್ತು. ಆದರೆ ಆಟ ಆರಂಭವಾಗಿ ೩.೩ ಓವರ್‌ನಲ್ಲಿ ಮತ್ತೆ ಮಳೆ ಶುರುವಾಯಿತು. ಹೀಗಾಗಿ ಪಂದ್ಯವನ್ನು ಮತ್ತೆ ಸ್ಥಗಿತಗೊಳಿಸಲಾಯಿತು. ಇಷ್ಟರಲ್ಲೇ ಟೀಮ್ ಇಂಡಿಯಾ ೨ ವಿಕೇಟ್ ಕಳೆದುಕೊಂಡು ೨೮ ರನ್ ಮಾಡಿತ್ತು.
ಎಲ್ಲರ ನಿರೀಕ್ಷೆಯಂತೆ ಇಲ್ಲಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೇನು ಪಂದ್ಯ ಆರಂಭವಾಗಬೇಕೆನ್ನುವಾಗ (ನಿಗದಿತ ಸಮಯ ೭ ಗಂಟೆಯ ಹೊತ್ತಿಗೆ) ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ನಿಗದಿತ ಸಮಯದಲ್ಲಿ ಆರಂಭಿಸಲಾಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಮಳೆ ಕಡಿಮೆಯಾಗಿದ್ದರಿಂದ ೭.೫೦ಕ್ಕೆ (೫೦ ನಿಮಿಷ ತಡವಾಗಿ) ಪಂದ್ಯ ಪ್ರಾರಂಭಿಸಲು ಸಮಯ ನಿಗದಿಪಡಿಸಲಾಗಿತ್ತು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಲಾ ಎರಡು ಪಂದ್ಯ ಗೆದ್ದಿರುವುದರಿಂದ ಸರಣಿ ಸಮಬಲಗೊಂಡಿದ್ದು, ಇಂದಿನ ಪಂದ್ಯ ಮಹತ್ವದೆನಿಸಿದೆ.
ಸತತ ಐದನೇ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾ ಟಾಸ್ ಗೆದ್ದಿದ್ದು ವಿಶೇಷವಾಗಿದೆ. ನಿರೀಕ್ಷೆಯಂತೆ ಅದು ಬೌಲಿಂಗ್ ಆಯ್ಕೆಮಾಡಿಕೊಂಡಿದ್ದು, ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುತ್ತಿದೆ. ಆದರೆ ಮಳೆ ಮತ್ತೆ ಜೋರಾಗುವ ಸೂಚನೆಗಳಿರುವುದರಿಂದ ಈ ಪಂದ್ಯದ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಕುತೂಹಲ ಮೂಡಿದೆ.