Site icon Vistara News

Sports in 2024: ಮುಂದಿನ ವರ್ಷ ನಡೆಯುವ ಪ್ರಮುಖ ಕ್ರೀಡಾಕೂಟಗಳ ಪಟ್ಟಿ ಇಲ್ಲಿದೆ

Sports in 2024

ಬೆಂಗಳೂರು: ಇನ್ನೇನು 2 ದಿನಗಳು ಕಳೆದರೆ ಹೊಸ ವರ್ಷ ಆರಂಭವಾಗಲಿದೆ. ಜಗತ್ತು 2024ರನ್ನು ಸ್ವಾಗತಿಸಲು ಸಿದ್ಧವಾಗಲಿದೆ. ಮುಂದಿನ ವರ್ಷ ನಡೆಯುವ ಪ್ರಮುಖ ಕ್ರೀಡಾಕೂಟಗಳೆಂದರೆ(Sports in 2024) 2024ರ ಪ್ಯಾರಿಸ್ ಒಲಿಂಪಿಕ್ಸ್, ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್, ಕೋಪಾ ಅಮೇರಿಕಾ, ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ. ಇವೆಲ್ಲ ಯಾವಾಗ ನಡೆಯುತ್ತದೆ? ಎನ್ನುವ ಮಾಹಿತಿ ಇಂತಿದೆ.

ಪ್ಯಾರಿಸ್ 2024 ಒಲಿಂಪಿಕ್ಸ್: 26 ಜುಲೈ- 11 ಆಗಸ್ಟ್

2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ New Year 2024: ಇದು ಚುನಾವಣಾ ವರ್ಷ; ಮೋದಿ, ಬೈಡೆನ್‌ಗೆ ಸಿಗುತ್ತಾ ಮತ್ತೆ ಪವರ್?


ಯುರೋ-​2024

ಫಿಫಾ ವಿಶ್ವಕಪ್ ನಂತರ, ಅತಿ ದೊಡ್ಡ ಫುಟ್ಬಾಲ್​ ಟೂರ್ನಿಯಾದ ಯುರೋ(ಯುರೋಪಿಯನ್ ಫುಟ್ಬಾಲ್​ ಚಾಂಪಿಯನ್‌ಶಿಪ್)​ ಫುಟ್ಬಾಲ್​ ಟೂರ್ನಿ ಮುಂದಿನ ವರ್ಷ ನಡೆಯುವ ಎರಡನೇ ಅತಿ ದೊಡ್ಡ ಕ್ರೀಡಾ ಟೂರ್ನಿಯಾಗಿದೆ. ಜೂನ್ 14 ರಿಂದ ಜುಲೈ 14 ರವರೆಗೆ ಜರ್ಮನಿ ಆತಿಥ್ಯದಲ್ಲಿ ಯುರೋ ಕಪ್​ ನಟೆಯಲಿದೆ. ಒಟ್ಟು 51 ಪಂದ್ಯಗಳನ್ನು ನಡೆಸಲು ಹತ್ತು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ, ಅವುಗಳಲ್ಲಿ ಮ್ಯೂನಿಚ್ ಫುಟ್ಬಾಲ್ ಅರೆನಾ, ಡಸೆಲ್ಡಾರ್ಫ್ ಅರೆನಾ ಸೇರಿ ಕೆಲ ಪ್ರಮುಖ ನಗರದಲ್ಲಿ ಪಂದ್ಯಾವಳಿ ನಡೆಯಲಿದೆ.


2024 ಪುರುಷರ T20 ವಿಶ್ವಕಪ್: 4-30 ಜೂನ್

9ನೇ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಮುಂದಿನ ವರ್ಷ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಸಲಾಗಿದೆ. ತಂಡಗಳು ತಲಾ 5ರಂತೆ 4 ಗುಂಪುಗಳಾಗಿ ವಿಭಜನೆ ಮಾಡಲಾಗುತ್ತದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್​-8 ಹಂತಕ್ಕೇರಲಿವೆ. ಇಲ್ಲಿ ಮತ್ತೆ ರೌಂಡ್​ ರಾಬಿನ್​ ಮಾದರಿ ಪಂದ್ಯ ನಡೆದ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್​ಗೇರಲಿವೆ. ಟೂರ್ನಿಯ ಪಂದ್ಯಗಳು ಜೂನ್ 4 ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ.

ಇದನ್ನೂ ಓದಿ New Year 2024: ಹೊಸ ವರ್ಷದಲ್ಲಿ ನೀವು ಖರೀದಿಸಲೇಬೇಕಾದ ಸ್ಮಾರ್ಟ್‌ಫೋನ್ಸ್!


2024 ಮಹಿಳೆಯ T20 ವಿಶ್ವಕಪ್

ಮಹಿಳಾ ಟಿ20 ವಿಶ್ವಕಪ್ ಕೂಡ ಮುಂದಿನ ವರ್ಷ ನಡೆಯಲಿದೆ. ಬಾಂಗ್ಲಾದೇಶದ ಆತಿಥ್ಯದಲ್ಲಿ ಟೂರ್ನಿ ನಡೆಸಲಾಗುತ್ತದೆ. ಆದರೆ ಪಂದ್ಯಗಳ ವೇಳಾಪಟ್ಟಿ ಇನಷ್ಟೇ ಪ್ರಕಟಗೊಳ್ಳಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಟೂರ್ನಿ ಸೆಪ್ಟಂಬರ್​-ಅಕ್ಟೋಬರ್​ನಲ್ಲಿ ನಡೆಸುವ ಸಾಧ್ಯತೆ ಇದೆ.

ಕೋಪಾ ಅಮೇರಿಕಾ 2024 (20 ಜೂನ್-14 ಜುಲೈ)

ಪ್ರತಿಷ್ಠಿತ ಫುಟ್ಬಾಲ್​ ಟೂರ್ನಿಯಾದ ಕೋಪಾ ಅಮೇರಿಕಾ ಪಂದ್ಯಾವಳಿ ಮುಂದಿನ ವರ್ಷ ಜೂನ್ 20 ರಿಂದ ಜುಲೈ 14ರ ತನಕ ನಡೆಯಲಿದೆ. 48ನೇ ಆವೃತ್ತಿ ಈ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಪಂದ್ಯಗಳು ಅಮೆರಿಕದಲ್ಲಿ ನಡೆಯಲಿವೆ. ಈಗಾಗಲೇ ಪಂದ್ಯಗಳ ಆತಿಥ್ಯಕ್ಕೆ 14 ಪಟ್ಟಣಗಳು ಸಜ್ಜಾಗಿ ನಿಂತಿವೆ.


ಐಪಿಎಲ್​ 2024

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಮಾರ್ಚ್ 22 ರಿಂದ ಮೇ ಅಂತ್ಯದವರೆಗೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ಆದರೆ, ಮುಂದಿನ ವರ್ಷ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುವ ಕಾರಣ ನಿಖರವಾದ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಮತ್ತು ವೇಳಾಪಟ್ಟಿಯು ಚುನಾವಣಾ ವೇಳಾಪಟ್ಟಿಯನ್ನು ಅವಲಂಬಿಸಿರುತ್ತದೆ.

Exit mobile version