ನವ ದೆಹಲಿ: ಇತ್ತೀಚೆಗೆ 89.30 ಮೀಟರ್ ಸಾಧನೆಯೊಂದಿಗೆ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದ ನಮ್ಮ ದೇಶದ ಹೆಮ್ಮೆಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಶನಿವಾರ ೮೬.೬೯ ಮೀಟರ್ ಸಾಧನೆ ಮಾಡಿ ಫಿನ್‌ಲೆಂಡ್‌ನಲ್ಲಿ ನಡೆಯುತ್ತಿರುವ ಕುವೋರ್ತಾನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಂತರ ಅವರು ಗೆದ್ದ ಎರಡನೇ ಚಿನ್ನ ಇದಾಗಿದೆ. ಇದೇ ವಾರ ಫಿನ್‌ಲೆಂಡ್‌ನಲ್ಲಿ ಮುಗಿದ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಕೂಡ ನೀರಜ್ ಚೋಪ್ರಾ 89.30 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದ್ದರು. ಇದು ಟೋಕಿಯೊ ಒಲಿಂಪಿಕ್ಸ್‌ಗೂ ಮಿಗಿಲಾದ ಸಾಧನೆಯಾಗಿತ್ತು. ಆದರೂ ಅವರು ಬೆಳ್ಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿತ್ತು. ಈ ಒಂದೇ ವಾರದಲ್ಲಿ ಅವರು ಚಿನ್ನ ಮತ್ತು ಬೆಳ್ಳಿಯನ್ನು ಗೆದ್ದಂತಾಗಿದೆ.
ಶನಿವಾರ ಚೋಪ್ರಾ ಎರಡು ಫೌಲ್ ಥ್ರೋಗಳನ್ನು ಮಾಡಿದರು ಮತ್ತು ಕೊನೆಯ ಮೂರು ಎಸೆತಗಳಿಂದ ಹೊರಗುಳಿದರು. ಟೆನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ಈ ಪಂದ್ಯದಲ್ಲಿ (86,64 ಮೀ) ಬೆಳ್ಳಿ ಗೆದ್ದರೆ, ಹಾಲಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ (84.75ಮೀ,) ಕಂಚಿಗೆ ತೃಪ್ತಿ ಪಟ್ಟರು.
ಭಾರತದ ಇನ್ನೋರ್ವ ಜಾವೆಲಿನ್ ಎಸೆತಗಾರ ಸಂದೀಪ್ ಔದ್ರಿ ೬೦.೩೫ ಮೀಟರ್ ಸಾಧನೆ ಮಾಡುವ ಮೂಲಕ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಹೊಸ ದಾಖಲೆ ಬರೆದಿದ್ದರು. ಅವರ ಸಾಧನೆಗೆ ಚಿನ್ನದ ಪದಕವೂ ದಕ್ಕಿತ್ತು. ಆ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂದ ಏಕೈಕ ಚಿನ್ನದ ಪದಕ ಅದಾಗಿತ್ತು. 88.07 ಮೀ ದೂರ ಜಾವೆಲಿನ್ ಎಸೆದು ನೀರಜ್ ಭಾರತದ ಹೆಮ್ಮೆಯಾಗಿದ್ದರು. ಭಾರತದ ಆಟಗಾರರು ಆವರೆಗೆ ಅಷ್ಟು ದೂರ ಜಾವೆಲಿನ್ ಎಸೆದ ದಾಖಲೆ ಇರಲಿಲ್ಲ.
ಇದನ್ನೂ ಓದಿ| Javelin Throw: ಚಿನ್ನದ ಹುಡುಗ ನೀರಜ್ ಚೋಪ್ರಾ ಹೊಸ ದಾಖಲೆ