ಚೆನ್ನೈ: ಶುಕ್ರವಾರ ನಡೆದ ಐಪಿಎಲ್ನ ಕ್ವಾಲಿಫೈಯರ್-2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ರಾಜಸ್ಥಾನ್ ರಾಯಲ್ಸ್(SRH vs RR) ವಿರುದ್ಧ 36 ರನ್ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಮೇ 26ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯ ಕೂಡ ಚಿದಂಬರಂ ಸ್ಟೇಡಿಯಂನಲ್ಲೇ ನಡೆಯಲಿದೆ.
ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 175 ರನ್ ಬಾರಿಸಿತು. ಜವಾಬಿತ್ತ ರಾಜಸ್ಥಾನ್ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್ ನಷ್ಟಕ್ಕೆ 139 ರನ್ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ತಂಡದ ಸೋಲು ಕಂಡು ಪುಟ್ಟ ಅಭಿಮಾನಿಯೊಬ್ಬಳು ಕಣ್ಣೀರು ಸುರಿಸಿದ ದೃಶ್ಯ ಕೂಡ ಕಂಡು ಬಂತು. ಅತ್ತ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ವಿಕೆಟ್ ಬಿದ್ದಾಗಲೆಲ್ಲಾ ಕುಣಿದು ಕುಪ್ಪಳಿಸುತ್ತಾ, ತನ್ನ ತಂದೆಯನ್ನು ತಬ್ಬಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದರು.
ಚೇಸಿಂಗ್ ವೇಳೆ ರಾಜಸ್ಥಾನ್(Rajasthan Royals) ತಂಡಕ್ಕೆ ಆಸರೆಯಾದದ್ದು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮಾತ್ರ. ತಂಡ 24 ರನ್ ಗಳಿಸಿದ್ದ ವೇಳೆ ಟಾಮ್ ಕೊಹ್ಲರ್-ಕ್ಯಾಡ್ಮೋರ್(10) ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ದ್ವಿತೀಯ ವಿಕೆಟ್ಗೆ ಜತೆಯಾದ ನಾಯಕ ಸಂಜು ಸ್ಯಾ,ಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಕೆಲ ಕಾಲ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು. ಆದರೆ ಈ ಜತೆಯಾಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಯಾಮ್ಸನ್ 10 ರನ್ ಗಳಿಸಿದ್ದ ವೇಳೆ ವಿಕೆಟ್ ಕಳೆದುಕೊಂಡರು. ಆ ಬಳಿಕ ಬಂದ ರಿಯಾನ್ ಪರಾಗ್(6), ಆರ್ ಅಶ್ವಿನ್(0), ಶಿಮ್ರಾನ್ ಹೆಟ್ಮೇರ್(4) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಯಾರೂ ಕೂಡ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ಸು ಕಾಣಲಿಲ್ಲ. ಜೈಸ್ವಾಲ್ 3 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ 42 ರನ್ ಗಳಿಸಿದರು.
ಅಂತಿಮ ಹಂತದಲ್ಲಿ ಧೃವ್ ಜುರೇಲ್ ಅರ್ಧಶತಕ ಬಾರಿಸುವ ಮೂಲಕ ಶಕ್ತಿ ಮೀರಿದ ಬ್ಯಾಟಿಂಗ್ ಹೋರಾಟ ನಡೆಸಿದರು. ಇದೇ ವೇಳೆ ನಟರಾಜ್ ಓವರ್ನಲ್ಲಿ ಗಂಟಲಿಗೆ ಚೆಂಡು ತಾಗಿಸಿಕೊಂಡು ಸಣ್ಣ ಮಟ್ಟಿನ ಗಾಯಕ್ಕೆ ತುತ್ತಾದರು. ಆದರೆ ಅವರ ಆಟಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗುತ್ತಿದ್ದರೆ ರಾಜಸ್ಥಾನ್ಗೆ ಗೆಲುವು ಒಲಿಯುವ ಸಾಧ್ಯತೆ ಇತ್ತು. ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್ಮನ್ ಪೊವೆಲ್(6) ಕೂಡ ವಿಫಲರಾದರು. ಹೈದರಾಬಾದ್ ಪರ ಶಾಬಾಜ್ ಅಹ್ಮದ್ 4 ಓವರ್ಗೆ ಕೇವಲ 23 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಡೆವಿದರು. ಪಾರ್ಟ್ ಟೈಮ್ ಬೌಲರ್ ಅಭಿಷೇಕ್ ಶರ್ಮ ಈ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರುವ ಮೂಲಕ 24 ರನ್ಗೆ 2 ವಿಕೆಟ್ ಕಿತ್ತರು. ಅಜೇಯರಾಗಿ ಉಳಿದ ಜುರೇಲ್ 35 ಎಸೆತಗಳಿಂದ 56 ರನ್ ಬಾರಿಸಿದರು. ಇದರದ್ದೇ ತಂಡದ ಪರ ಅತ್ಯಧಿಕ ಗಳಿಕೆ.
ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದಂತೆ ಈ ಪಂದ್ಯದಲ್ಲಿಯೂ ಆರಂಭಿಕ ಆಘಾತ ಎದುರಿಸಿತು. ಎಡಗೈ ಬ್ಯಾಟರ್ ಟ್ರೆಂಟ್ ಬೌಲ್ಟ್ ಅವರ ಮೊದಲ ಓವರ್ನಲ್ಲಿಯೇ ಬಡಬಡನೆ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಇದೇ ಓವರ್ನ ಅಂತಿಮ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ
ದ್ವಿತೀಯ ವಿಕೆಟ್ಕೆ ಆಡಲಿಳಿದ ರಾಹುಲ್ ತ್ರಿಪಾಠಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ಕೊಟ್ಟು 15 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 37 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಹಲವು ಪಂದ್ಯಗಳ ಬಳಿಕ ಈ ಪಂದ್ಯದಲ್ಲಿ ಆಡಿದ ಐಡೆನ್ ಮಾರ್ಕ್ರಮ್ ಕೇವಲ 1 ರನ್ಗೆ ಔಟಾಗಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಒಂದೇ ಓವರ್ನಲ್ಲಿ ಬೌಲ್ಟ್ 2 ಪ್ರಮುಖ ವಿಕೆಟ್ ಬೇಟೆಯಾಡಿದರು. ಅಲ್ಲಿಗೆ ಆರಂಭಿಕ ಮೂರು ವಿಕೆಟ್ ಕೂಡ ಬೌಲ್ಟ್ ಪಾಲಾಯಿತು.
ಆಪದ್ಬಾಂಧವ ಕ್ಲಾಸೆನ್
ಬೌಲರ್‌ಗಳ ದಾಳಿಯ ನಡುವೆಯೂ ಹೆನ್ರಿಚ್ ಕ್ಲಾಸೆನ್ ಅರ್ಧಶತಕ ಬಾರಿಸಿ ಆಧರಿಸಿ ನಿಂತ ಪರಿಣಾಮ ತಂಡ 150ರ ಗಡಿ ದಾಟಿ ಉತ್ತಮ ರನ್ ಕಲೆಹಾಕಿತು. ಒಂದೆಡೆ ವಿಕೆಟ್‌ಗಳು ಬಡಬಡನೆ ಉರುಳುತ್ತಿದ್ದರೂ ಕ್ಲಾಸೆನ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದು ಫಲ ಕೊಟ್ಟಿತು. ಕ್ಲಾಸೆನ್ ಹೊರತುಪಡಿಸಿದರೆ ಟ್ರಾವಿಸ್ ಹೆಡ್ ಪ್ರದರ್ಶನ ಗಮನಾರ್ಹ ಮಟ್ಟದಲ್ಲಿತ್ತು. ಹೆಡ್ 34 ರನ್ ಬಾರಿಸಿದರು. ಹೆಡ್ ಮತ್ತು ಕ್ಲಾಸೆನ್ ಸೇರಿಕೊಂಡು 4 ವಿಕೆಟ್ಗೆ 42 ರನ್ಗಳ ಜತೆಯಾಟ ನಡೆಸಿದರು. 18 ಓವರ್ ತನಕ ಬ್ಯಾಟಿಂಗ್ ನಡೆಸಿದ ಕ್ಲಾಸೆನ್ 34 ಎಸೆತಗಳಿಂದ ಭರ್ತಿ 50 ರನ್ ಗಳಿಸಿ ಸಂದೀಪ್ ಶರ್ಮಾ ಅವರ ಸ್ಲೋ ಯಾರ್ಕರ್ ಎಸೆತದ ಮರ್ಮವನ್ನು ಅರಿಯುವಲ್ಲಿ ವಿಫಲವಾಗಿ ಕ್ಲೀನ್ ಬೌಲ್ಡ್ ಆದರು. ಅವರ ಅರ್ಧಶತಕದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 4 ಸಿಕ್ಸರ್ ಸಿಡಿಯಿತು.
ರಾಜಸ್ಥಾನ್ ಪರ ಚಹಲ್ ವಿಕೆಟ್ ಕೀಳದಿದ್ದರೂ ಕೂಡ ಪ್ರಮುಖ ಮೂರು ಆಟಗಾರರ ಕ್ಯಾಚ್ ಹಿಡಿದು ಮಿಂಚಿದರು. ಅವೇಶ್ ಖಾನ್ ಅವರು ಅಪಾಯಕಾರಿ ಅಬ್ದುಲ್ ಸಮದ್(0) ಮತ್ತು ನಿತೇಶ್ ರೆಡ್ಡಿ(5) ಅವರನ್ನು ಸತತ ಎಸೆತಗಳಿಂದ ಔಟ್ ಮಾಡಿದ್ದು ಹೈದರಾಬಾದ್ನ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಯಿತು. ಅಂತಿಮ ಹಂತದಲ್ಲಿ ಶಹಬಾಜ್ ಅಹಮದ್ 18 ರನ್ ಬಾರಿಸಿದರು. ರಾಜಸ್ಥಾನ್ ಪರ ಬೌಲ್ಟ್ ಮತ್ತು ಅವೇಶ್ ಖಾನ್ ತಲಾ 3 ವಿಕೆಟ್ ಕಿತ್ತರೆ, ಸಂದೀಪ್ ಶರ್ಮ 2 ವಿಕೆಟ್ ಪಡೆದರು.