Site icon Vistara News

Asia Cup | ಶ್ರೀಲಂಕಾ ವಿರುದ್ಧ ಭಾರತಕ್ಕೆ 6 ವಿಕೆಟ್‌ ಸೋಲು, ಫೈನಲ್‌ ಅವಕಾಶ ಬಹುತೇಕ ಕಷ್ಟ

asia cup

ದುಬೈ : ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ವಿಫಲ ಪ್ರದರ್ಶನ ನೀಡಿದ ಭಾರತ ತಂಡ, ಏಷ್ಯಾ ಕಪ್‌ (Asia Cup) ಟೂರ್ನಿಯ ಸೂಪರ್‌-೪ ಹಂತದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ೬ ವಿಕೆಟ್‌ಗಳಿಂದ ಪರಾಭವಗೊಂಡಿತು. ಇದರೊಂದಿಗೆ ಹಾಲಿ ಆವೃತ್ತಿಯಲ್ಲಿ ಫೈನಲ್‌ಗೇರುವ ಭಾರತದ ಅವಕಾಶ ಕ್ಷೀಣಗೊಂಡಿದೆ. ಬುಧವಾರ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ತಂಡವನ್ನು ಪಾಕಿಸ್ತಾನ ಸೋಲಿಸಿದರೆ ಭಾರತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಪಾಕ್‌ ಸೋತರೆ ಅವಕಾಶ ಜೀವಂತವಾಗಿರಲಿದೆ. ಅತ್ತ ಎರಡು ಸೂಪರ್‌-೪ ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ತಂಡ ಫೈನಲ್‌ ಸನಿಹಕ್ಕೆ ಹೋಯಿತು.

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಆಹ್ವಾನ ಪಡೆದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ಕಳೆದುಕೊಂಡು ೧೭೧ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಆತಿಥೇಯ ಶ್ರೀಲಂಕಾ ತಂಡ ೧೯.೧ ಓವರ್‌ಗಳಲ್ಲಿ ೪ ವಿಕೆಟ್‌ ನಷ್ಟಕ್ಕೆ ೧೭೪ ರನ್‌ ಬಾರಿಸಿ ಜಯ ಸಾಧಿಸಿತು. ಬಲಿಷ್ಠ ಭಾರತವನ್ನು ಬೇಟೆಯಾಡಿದ ದಸುನ್‌ ಶನಕ ಬಳಗ ಫೈನಲ್‌ಗೇರುವ ಹಾದಿಯಲ್ಲಿ ಪ್ರಮುಖ ಹೆಜ್ಜೆಯನ್ನಿಟ್ಟಿತು.

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಲಂಕಾ ಪರ ಪಾಥುಮ್‌ ನಿಸ್ಸಂಕ (೫೨), ಕುಸಾಲ್‌ ಮೆಂಡಿಸ್‌ (೫೭) ಅರ್ಧ ಶತಕಗಳನ್ನು ಬಾರಿಸಿ ಗೆಲುವಿನ ರೂವಾರಿಗಳೆನಿಸಿಕೊಂಡರು.

ರೋಹಿತ್ ಶ್ರಮ ವ್ಯರ್ಥ

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಕೆ.ಎಲ್‌. ರಾಹುಲ್ (೬) ಹಾಗೂ ವಿರಾಟ್‌ ಕೊಹ್ಲಿ (೦) ಅವರ ಕಳಪೆ ಬ್ಯಾಟಿಂಗ್‌ನಿಂದಾಗಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ, ನಾಯಕ ರೋಹಿತ್‌ ಶರ್ಮ (೭೨) ಸ್ಫೋಟಕ ಅರ್ಧ ಶತಕ ಬಾರಿಸಿದ್ದರೆ, ಸೂರ್ಯಕುಮಾರ್ ಯಾದವ್‌ ೩೪ ರನ್‌ ಬಾರಿಸುವ ಮೂಲಕ ಚೇತರಿಕೆ ಕಲ್ಪಿಸಿದರು. ಈ ಜೋಡಿ ಮೂರನೇ ವಿಕೆಟ್‌ಗೆ ೧೦೯ ರನ್‌ಗಳ ಜತೆಯಾಟ ನೀಡಿತು. ರೋಹಿತ್‌ ಶರ್ಮ ೩೨ ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರಲ್ಲದೆ, ೪೧ ಎಸೆತಗಳಲ್ಲಿ ೭೨ ರನ್‌ ಬಾರಿಸಿದರು. ಸೂರ್ಯಕುಮಾರ್‌ ೨೯ ಎಸೆತಗಳಲ್ಲಿ ೩೪ ರನ್‌ ಗಳಿಸಿದರು. ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್‌ ಪಂತ್‌ ತಲಾ ೧೭ ರನ್‌ಗಳ ಕೊಡುಗೆ ಕೊಟ್ಟರು. ಅಂತಿಮವಾಗಿ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ಕಳೆದುಕೊಂಡು ೧೭೩ ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಸ್ಕೋರ್‌ ವಿವರ

ಭಾರತ : ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೭೩ (ರೋಹಿತ್‌ ಶರ್ಮ ೭೨, ಸೂರ್ಯಕುಮಾರ್ ಯಾದವ್‌ ೩೪; ದಿಲ್ಶನ್‌ ಮಧುಶನಕ ೨೪ಕ್ಕೆ ೩, ಚಾಮಿಕಾ ಕರುಣಾರತ್ನೆ ೨೭ಕ್ಕೆ೨).

ಶ್ರೀಲಂಕಾ: ೧೯. ೫ ಓವರ್‌ಗಳಲ್ಲಿ ೪ ವಿಕೆಟ್‌ ನಷ್ಟಕ್ಕೆ ೧೭೪ (ಪಾಥುಮ್‌ ನಿಸ್ಸಂಕ ೫೨, ಕುಸಾಲ್ ಮೆಂಡಿಸ್‌ ೫೭, ಯಜ್ವೇಂದ್ರ ಚಹಲ್‌ ೩೪ಕ್ಕೆ೩).

Exit mobile version