ಕೊಲೊಂಬೊ: ಏಷ್ಯಾ ಕಪ್ (Asia Cup 2023) ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 2 ವಿಕೆಟ್ಗಳಿಂದ ಸೋಲಿಸಿದ ಕಳೆದ ಆವೃತ್ತಿಯ ಚಾಂಪಿಯನ್ ಶ್ರೀಲಂಕಾ ತಂಡ ಏಷ್ಯಾ ಕಪ್ನ ಫೈನಲ್ಗೇರಿಸಿದೆ. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಕೊನೇ ಕ್ಷಣದ ತನಕ ಹೋರಾಡಿದ ಲಂಕಾ ತಂಡ ಗೆಲುವು ತನ್ನದಾಗಿಸಿಕೊಂಡು ಸ್ಥಳೀಯ ಅಭಿಮಾನಿಗಳಿಗೆ ಸಂತಸವನ್ನು ಉಣಬಡಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಸೆಪ್ಟೆಂಬರ್ 17ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಎದುರಾಗಲಿದೆ. ಈ ವಿಜಯದೊಂದಿಗೆ ಲಂಕಾ ತಂಡ ಏಷ್ಯಾ ಕಪ್ನಲ್ಲಿ 11 ನೇ ಬಾರಿಗೆ ಫೈನಲ್ಗೇರಿದಂತಾಯಿತು. ಅಂತೆಯೇ 8ನೇ ಬಾರಿ ಲಂಕಾ ಹಾಗೂ ಭಾರತದ ಮುಖಾಮುಖಿಯಾದಂತಾಗಿದೆ.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 42 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 42ನೇ ಓವರ್ನ ಕೊನೇ ಎಸೆತದಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿತು. ಕೊನೇ ಹಂತದಲ್ಲಿ ಪುಟಿದೆದ್ದು ಆಡಿದ ಪಾಕ್ ತಂಡ ಈ ಮೂಲಕ ನಿರಾಸೆಗೆ ಒಳಗಾಯಿತು. ಈ ಬಾರಿಯ ಏಷ್ಯಾ ಕಪ್ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿತ್ತು. ಆದರೆ, ಪಾಕ್ ತಂಡಕ್ಕೆ ತನ್ನ ಆತಿಥ್ಯದಲ್ಲಿ ಫೈನಲ್ಗೇರುವ ಅವಕಾಶವೂ ಸಿಗಲಿಲ್ಲ.
ಮೊದಲು ಬ್ಯಾಟ್ ಮಾಡಿ ಪಾಕಿಸ್ತಾನ ತಂಡದ ಪರ ಆರಂಭಿಕ ಬ್ಯಾಟರ್ ಫಖರ್ ಜಮಾನ್ 4 ರನ್ಗಳಿಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆಗೆ ಕಾರಣರಾದರು. ಉತ್ತಮ ಫಾರ್ಮ್ನಲ್ಲಿರುವ ನಾಯಕ ಬಾಬರ್ ಅಜಮ್ ಕೂಡ 29 ರನ್ಗಳಿಗೆ ಔಟಾದರು. ಈ ವೇಳೆ ಪಾಕಿಸ್ತಾನ ತಂಡ 73 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ, ಅ ಬಳಿಕ ಬ್ಯಾಟ್ ಮಾಡಲು ಬಂದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (86) ಅರ್ಧ ಶತಕ ಬಾರಿಸಿ ಪಾಕ್ ತಂಡಕ್ಕೆ ಸವಾಲಿನ ಮೊತ್ತ ಪೇರಿಸಲು ನೆರವಾದರು.
ಇದನ್ನೂ ಓದಿ : Asia Cup 2023 : ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಗೆ ಖಡಕ್ ಉತ್ತರ ಕೊಟ್ಟ ಜಯ್ ಶಾ
ಮೊಹಮ್ಮದ್ ರಿಜ್ವಾನ್ಗೆ ಸ್ಪಿನ್ನರ್ ಇಫ್ತಿಕಾರ್ ಅಹಮದ್ ಉತ್ತಮ ಬೆಂಬಲ ನೀಡಿದರು. ಅವರು 40 ಎಸೆತಕ್ಕೆ 47 ರನ್ ಬಾರಿಸಿದರು. ಏತನ್ಮಧ್ಯೆ, ಮೊಹ್ಮದ್ ಹ್ಯಾರಿಸ್ (3) ಹಾಗೂ ಮೊಹಮ್ಮದ್ ನವಾಜ್ (12) ಬೇಗ ವಿಕೆಟ್ ಒಪ್ಪಿಸಿದರು. ಆದರೆ ರಿಜ್ವಾನ್ ಹಾಗೂ ಇಫ್ತಿಕಾರ್ ಜತೆಯಾಟದ ನೆರವಿನಿಂದ ಪಾಕ್ ತಂಡ ಉತ್ತಮ ಮೊತ್ತ ಪೇರಿಸಿತು.
ಮೆಂಡಿಸ್ ಅರ್ಧ ಶತಕ
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಶ್ರೀಲಂಕಾ ತಂಡದ ಬ್ಯಾಟರ್ ಕುಸಾಸ್ ಪೆರೆರಾ (17) ಅನಗತ್ಯ ರನ್ಔಟ್ಗೆ ಬಲಿಯಾದರು. ಈ ವೇಳೆ ತಂಡ 20 ರನ್ ಬಾರಿಸಿತು. ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಕುಸಾಲ್ ಮೆಂಡಿಸ್ (91) ಅದ್ಬುತವಾಗಿ ಬ್ಯಾಟ್ ಬೀಸಿ ಅರ್ಧ ಶತಕ ಬಾರಿಸಿದರು. ಸದೀರ ಸಮರವಿಕ್ರಮ (48) ಅವರೊಂದಿಗೆ ಮೂರನೇ ವಿಕೆಟ್ಗೆ 100 ರನ್ಗಳ ಜತೆಯಾಟವಾಡಿದರು. ನಂತರ ಬಂದ ಚರಿತ್ ಅಸಲಂಕಾ (49) ಕೊನೆ ಹಂತದ ತನಕ ಬ್ಯಾಟಿಂಗ್ ಮಾಡಿ ಗೆಲುವು ತಂದುಕೊಟ್ಟರು.
ಕುಸಾಲ್ ಮೆಂಡಿಸ್ ಹಾಗೂ ಚರಿತ್ ಕ್ರೀಸ್ನಲ್ಲಿ ಇರುವ ತನಕ ಲಂಕಾ ತಂಡದ ಗೆಲುವು ಸುಲಭ ಎಂಬಂತಿತ್ತು. ಆದರೆ, ಕೊನೇ ಹಂತದಲ್ಲಿ ಒತ್ತಡಕ್ಕೆ ಒಳಗಾದ ಲಂಕಾ ಆಟಗಾರರು ಸತತವಾಗಿ ವಿಕೆಟ್ಗಳನ್ನು ಒಪ್ಪಿಸಿದರು. ಪಾಕ್ ತಂಡದ ಪರ ಇಫ್ತಿಕಾರ್ ಅಹಮದ್ 3 ವಿಕೆಟ್ ಪಡೆದರೆ, ಶಹೀನ್ ಅಫ್ರಿದಿ 2 ವಿಕೆಟ್ ಉರುಳಿಸಿದರು.