ವಿಶಾಖಪಟ್ಟಣ: ಮಿಚೆಲ್ ಸ್ಟಾರ್ಕ್ ಅವರ ಸ್ವಿಂಗ್ ದಾಳಿಗೆ ತತ್ತರಿಸಿದ ಭಾರತ(IND VS AUS) ತಂಡ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 117 ರನ್ಗೆ ಕುಸಿತ ಕಂಡಿದೆ. ಇದು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಅತಿ ಕಡಿಮೆ ಮೊತ್ತವಾಗಿದೆ. ಆದರೆ 1981ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ 63 ರನ್ಗೆ ಆಲೌಟ್ ಆದ ಸಂಕಟಕ್ಕೆ ಸಿಲುಕಿತ್ತು.
ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 26 ಓವರ್ಗಳಲ್ಲಿ 117 ರನ್ಗೆ ಆಲೌಟ್ ಆಯಿತು. ಆಸೀಸ್ ಗೆಲುವಿಗೆ 118 ರನ್ ಬಾರಿಸಬೇಕಿದೆ.
ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ನಾಯಕತ್ವ ವಹಿಸಿಕೊಂಡರು. ಆದರೆ ಅವರ ಆಗಮನ ತಂಡಕ್ಕೆ ಯಾವುದೇ ಪ್ರಯೋಜನಾಗಲಿಲ್ಲ ಅವರು 13 ರನ್ಗೆ ಆಟ ಮುಗಿಸಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟಾಗುವ ಮೂಲಕ ಘೋರ ವೈಫಲ್ಯ ಕಂಡರು. ಮೊದಲ ಪಂದ್ಯದಲ್ಲಿಯೂ ಅವರು ಸ್ಟಾರ್ಕ್ ಎಸೆತಕ್ಕೆ ಶೂನ್ಯ ಸುತ್ತಿದ್ದರು.
ಮುಂಬಯಿ ಪಂದ್ಯದ ಗೆಲುವಿನ ಹೀರೋ ಕೆ.ಎಲ್. ರಾಹುಲ್(9) ಕೂಡ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ವಿರಾಟ್ ಕೊಹ್ಲಿ 31 ರನ್ ಗಳಿಸಿದರು. ಅಂತಿಮವಾಗಿ ಅಕ್ಷರ್ ಪಟೇಲ್ ಅವರು ನಡೆಸಿದ ಸ್ಣಣ ಮಟ್ಟದ ಹೋರಾಟದಿಂದಾಗಿ ಭಾರತ 100 ಗಡಿ ದಾಟಿತು. ಅಕ್ಷರ್ ಪಟೇಲ್ ಅಜೇಯ 29 ರನ್ ಬಾರಿಸಿದರು. ಇವರಿಗೆ ಒಬ್ಬ ಆಟಗಾರ ಸಾಥ್ ನೀಡುತ್ತಿದ್ದರೂ ಭಾರತ 150 ಗಡಿ ದಾಟುತ್ತಿತ್ತು.
ಇದನ್ನೂ ಓದಿ IND VS AUS: ಸ್ಮಿತ್ ಸೂಪರ್ ಮ್ಯಾನ್ ಕ್ಯಾಚ್ ಕಂಡು ಬೆರಗಾದ ಪ್ರೇಕ್ಷಕರು; ವಿಡಿಯೊ ವೈರಲ್
ಮಿಚೆಲ್ ಸ್ಟಾರ್ಕ್ ಮತ್ತು ಸೀನ್ ಅಬೋಟ್ ಅವರು ಸೇರಿಕೊಂಡು ಭಾರತದ ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ಸು ಕಂಡರು. ಅದರಲ್ಲಿಯೂ ಸ್ಟಾರ್ಕ್ ಅವರ ದಾಳಿ ತುಂಬಾನೆ ಘಾತಕವಾಗಿತ್ತು. ಆರಂಭಿಕ ನಾಲ್ಕು ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಆರಂಭಿಕ ಆಘಾತವಿಕ್ಕಿದರು. 8 ಓವರ್ ಎಸೆದ ಅವರು ಒಂದು ಮೇಡನ್ ಸಹಿತ 53 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ಮಿಂಚಿದರು. ಸೀನ್ ಅಬೋಟ್ 3 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ಭಾರತ 26 ಓವರ್ಗಳಲ್ಲಿ 117 ರನ್ಗೆ ಆಲೌಟ್( ವಿರಾಟ್ ಕೊಹ್ಲಿ 31, ಅಕ್ಷರ್ ಪಟೇಲ್ ಅಜೇಯ 29, ಮಿಚೆಲ್ ಸ್ಟಾರ್ಕ್ 53ಕ್ಕೆ 5, ಸೀನ್ ಅಬೋಟ್ 23ಕ್ಕೆ 3)