ಬೆಂಗಳೂರು : ಮುಂಬರುವ ಟಿ೨೦ ವಿಶ್ವ ಕಪ್‌ಗೆ ಭಾರತ ತಂಡ (Team India) ಸೋಮವಾರ ಪ್ರಕಟಗೊಂಡಿದೆ. ಚೇತನ್ ಶರ್ಮ ನೇತೃತ್ವದ ಬಿಸಿಸಿಐ ಹಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸಭೆ ನಡೆಸಿದ ಬಳಿಕ ೧೫ ಆಟಗಾರರು ಹಾಗೂ ೪ ಮೀಸಲು ಆಟಗಾರರನ್ನು ಒಳಗೊಂಡಿರುವ ಟೀಮ್ ಇಂಡಿಯಾವನ್ನು ಘೋಷಿಸಿದೆ. ಭಾರತ ತಂಡದ ಬೆಂಚ್ ಸ್ಟ್ರೆಂಥ್ (ಅವಕಾಶಕ್ಕಾಗಿ ಕಾಯುತ್ತಿರುವ ಯುವ ಕ್ರಿಕೆಟಿಗರ ಬಳಗ) ದೊಡ್ಡದಿರುವ ಕಾರಣ ತಂಡದ ಅಯ್ಕೆ ಸಮಿತಿಗೆ ಸವಾಲಿನ ಸಂಗತಿ ಎಂಬುದ ನಿಶ್ಚಿತ. ಹೀಗಾಗಿ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಚರ್ಚೆಗೆ ಆಸ್ಪದ ಸಿಗದಂತೆ ಸಮತೋಲಿತ ತಂಡವನ್ನು ಪ್ರಕಟಿಸಲಾಗಿದೆ. ಆಸ್ಟ್ರೇಲಿಯಾದ ಪಿಚ್ ಪರಿಸ್ಥಿತಿಗೆ ಪೂರಕವಾಗಿ ಬೌಲಿಂಗ್ ವಿಭಾಗಕ್ಕೆ ಬಲ ಕೊಡುವ ಜತೆಗೆ ಹಿರಿತನ ಹಾಗೂ ಅನುಭವಕ್ಕೂ ಮಣೆ ಹಾಕಲಾಗಿದೆ.
ವಿಶ್ವ ಕಪ್ ತಂಡಕ್ಕೆ ಆಯ್ಕೆಯಾಗಿರುವ ಬಹುತೇಕ ಆಟಗಾರರು ಭಾನುವಾರ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ಪಾಲ್ಗೊಂಡವರು. ಆದರೆ, ವೇಗದ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಏಷ್ಯಾ ಕಪ್‌ನಲ್ಲಿ ಆಡಿರಲಿಲ್ಲ. ಡೆತ್ ಓವರ್ ಸ್ಪೆಷಲಿಸ್ಟ್‌ಗಳಾದ ಇವರಿಬ್ಬರೂ ಗಾಯದ ಸಮಸ್ಯೆಯಿಂದ ಏಷ್ಯಾ ಕಪ್‌ಗೆ ಅಲಭ್ಯರಾಗಿದ್ದರು. ಅದು ಪಂದ್ಯದ ಫಲಿತಾಂಶಗಳಲ್ಲಿ ಪ್ರತಿಫಲನಗೊಂಡಿತ್ತು. ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಸೂಪರ್-೪ ಹಣಾಹಣಿಯಲ್ಲಿ ಭಾರತದ ವೇಗಿಗಳು ಡೆತ್ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರಿಂದ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತ್ತು. ಹೀಗಾಗಿ ವಿಶ್ವ ಕಪ್ ತಂಡಕ್ಕೆ ಈ ಇಬ್ಬರು ಬೌಲರ್‌ಗಳ ಉಪಸ್ಥಿತಿ ಅನಿವಾರ್ಯವಾಗಿತ್ತು. ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾಗಿರುವ ಈ ಎರಡು ವೇಗದ ಅಸ್ತ್ರಗಳಿಗೆ ಆಯ್ಕೆಗಾರರು ಪ್ರಥಮ ಆದ್ಯತೆ ಕೊಟ್ಟಿದ್ದಾರೆ.
ಸಾಟಿಯಿಲ್ಲದ ಬ್ಯಾಟಿಂಗ್ ಬಲ
ವಿಶ್ವ ಕಪ್‌ಗೆ ಪ್ರಕಟಗೊಂಡಿರುವ ಭಾರತ ತಂಡವು ಬಲಿಷ್ಠವಾಗಿಯೇ ಇದೆ. ರೋಹಿತ್ ಶರ್ಮ ಅವರು ನಾಯಕತ್ವ ವಹಿಸಿಕೊಂಡಿದ್ದು, ಕನ್ನಡಿಗ ಹಾಗೂ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್‌ಗೆ ಅವಕಾಶ ಕಲ್ಪಿಸಲಾಗಿದೆ. ಇವರಿಬ್ಬರು ಟಿ೨೦ ಮಾದರಿಯಲ್ಲಿ ಭಾರತದ ಯಶಸ್ವಿ ಆರಂಭಿಕ ಜೋಡಿ. ಏಷ್ಯಾ ಕಪ್‌ನಲ್ಲಿ ಈ ಇಬ್ಬರೂ ಆಟಗಾರರು ಸಾಧಾರಣ ಪ್ರದರ್ಶನ ನೀಡಿದ್ದರು. ರೋಹಿತ್ ಶರ್ಮ ಒಂದು ಅರ್ಧ ಶತಕ ಬಾರಿಸಿದ್ದರೆ, ಕೆ. ಎಲ್. ರಾಹುಲ್ ಅವರದ್ದೂ ಒಂದೇ ಫಿಫ್ಟಿ. ಹೀಗಾಗಿ ಅವರ ಬಗ್ಗೆ ಜೋರು ವಿಮರ್ಶೆಗಳು ನಡೆದಿದ್ದವು. ಅದರಲ್ಲೂ ರಾಹುಲ್ ಅವರನ್ನು ತಂಡದಿಂದ ಕೈ ಬಿಡುವುದು ಸೂಕ್ತ ಎಂಬ ಸಲಹೆಗಳು ಕೇಳಿ ಬಂದಿದ್ದವು. ಆದರೆ, ಆಯ್ಕೆ ಸಮಿತಿ ಅದಕ್ಕೆ ಆಸ್ಪದ ಕೊಟ್ಟಿಲ್ಲ. ಆಸ್ಟ್ರೇಲಿಯಾದ ಪಿಚ್‌ಗಳಿಗೆ ರಾಹುಲ್ ಅವರಷ್ಟು ಉತ್ತಮ ಆಯ್ಕೆ ಇನ್ನೊಬ್ಬರಿಲ್ಲ ಎಂಬುದನ್ನು ಪರಿಗಣಿಸಿದ್ದಾರೆ. ಈ ಮೂಲಕ ಆರಂಭಿಕ ಬ್ಯಾಟಿಂಗ್ ಲಯಕ್ಕೆ ಇಂಬು ಕೊಡಲಾಗಿದೆ.
ಏಷ್ಯಾ ಕಪ್‌ನಲ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ, ನಿಸ್ಸಂದೇಹವಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಗಂಭೀರ್ ಅವರಂಥ ಹಿರಿಯ ಆಟಗಾರರ ಸಲಹೆಯನ್ನು ಬದಿಗಿಟ್ಟು ನೋಡಿದರೆ ಕೊಹ್ಲಿ ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಮುಂದುವರಿಯುವುದರಲ್ಲಿ ಅನುಮಾನಗಳಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಅವಕಾಶ ನೀಡಲಾಗಿದೆ. ಏಷ್ಯಾ ಕಪ್‌ನಲ್ಲಿ ಸೂರ್ಯ ಅಷ್ಟೊಂದು ಪ್ರಖರವಾಗಿರಲಿಲ್ಲ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿ ಬೇಜವಾಬ್ದಾರಿ ಪ್ರದರ್ಶನ ನೀಡಿದ್ದರು. ಆದರೆ, ಬಲಿಷ್ಠ ಆರಂಭಿಕ ಜೋಡಿ ಇರುವಾಗ ಕೊನೇ ಕ್ಷಣದಲ್ಲಿ ಬಿರುಸಾಗಿ ಬ್ಯಾಟ್ ಬೀಸುವ ಸೂರ್ಯ ಅವರ ಸೇವೆ ತಂಡಕ್ಕೆ ಅನಿವಾರ್ಯ ಎಂದು ಪರಿಗಣಿಸಲಾಗಿದೆ.
ಆಲ್‌ರೌಂಡರ್‌ಗಳ ಬಳಗ ಹೇಗಿದೆ?
ರವೀಂದ್ರ ಜಡೇಜಾ ಅವರ ಅಲಭ್ಯತೆಯಿಂದಾಗಿ, ಇದೀಗ ಪ್ರಕಟಗೊಂಡಿರುವ ಟೀಮ್ ಇಂಡಿಯಾದ ಆಲ್‌ರೌಂಡರ್‌ಗಳ ವಿಭಾಗ ಸ್ವಲ್ಪ ಮಟ್ಟಿಗೆ ಸೊರಗಿದೆ. ಅಗತ್ಯ ಸಂದರ್ಭಗಳಲ್ಲಿ ಸ್ಪಿನ್ ಬೌಲಿಂಗ್, ಅನಿವಾರ್ಯ ವೇಳೆಯಲ್ಲಿ ಬ್ಯಾಟಿಂಗ್ ಹಾಗೂ ಉತ್ತಮ ಫೀಲ್ಡರ್ ಆಗಿರುವ ಜಡೇಜಾ ಅವರ ಉಪಸ್ಥಿತಿ ಭಾರತ ತಂಡಕ್ಕೆ ಬೋನಸ್. ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಅವರ ವಿಶ್ರಾಂತಿಯಲ್ಲಿದ್ದಾರೆ. ಅವರ ಬದಲಿಗೆ ಆಯ್ಕೆಯಾಗಿರುವ ಅಕ್ಷರ್ ಪಟೇಲ್ ಅನನುಭವಿ. ಹೀಗಾಗಿ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಎಷ್ಟು ಪರಿಣಾಮಕಾರಿ ಎಂಬುದು ಪ್ರಶ್ನಾರ್ಥಕ ಸಂಗತಿ. ಅವರು ಎಡಗೈ ಬ್ಯಾಟ್ಸ್‌ಮನ್ ಅಗಿರುವ ಕಾರಣ ರೈಟ್ – ಲೆಫ್ಟ್ ಬ್ಯಾಲೆನ್ಸ್‌ಗಾಗಿ ಅಕ್ಷರ್ ಅನಿವಾರ್ಯವಾಗಬಹುದು. ಹಾರ್ದಿಕ್ ಪಾಂಡ್ಯ ಐದನೇ ಬೌಲರ್ ಹಾಗೂ ಐದು ಅಥವಾ ೬ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಮರ್ಥರಿದ್ದಾರೆ.
ಫಿನಿಶರ್‌ಗಳು ಯಾರು?
ದೀಪಕ್ ಹೂಡ, ದಿನೇಶ್ ಕಾರ್ತಿಕ್ ಫಿನಿಶರ್‌ಗಳು ಎಂಬ ಕಾರಣಕ್ಕೆ ೧೫ರ ಬಳಗಕ್ಕೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಹೂಡ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್. ಏಷ್ಯಾ ಕಪ್‌ನ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡ ಹೊರತಾಗಿಯೂ ಕೊನೇ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿಲ್ಲ. ದಿನೇಶ್ ಕಾರ್ತಿಕ್ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಫಿನಿಶರ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ, ಕಾಯಂ ವಿಕೆಟ್‌ಕೀಪರ್ ರಿಷಭ್ ಪಂತ್‌ಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿರುವ ಕಾರಣ, ಕಾರ್ತಿಕ್‌ಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಸಾಧ್ಯವಾಗುತ್ತಿಲ್ಲ.
ಇನ್ನೂ ರಿಷಭ್ ಪಂತ್ ಅವರ ಇತ್ತೀಚಿನ ದಿನಗಳ ಪ್ರದರ್ಶನ ತಂಡದ ಮಟ್ಟಿಗೆ ಆಶಾದಾಯಕವಾಗಿಲ್ಲ. ಆದರೆ, ಭವಿಷ್ಯದ ತಂಡ ರೂಪಿಸುವ ಉದ್ದೇಶದಿಂದ ಪಂತ್‌ಗೆ ಅವಕಾಶ ಕೊಡಲೇಬೇಕಾಗಿದೆ. ಅವರ ಬ್ಯಾಟಿಂಗ್ ತಂತ್ರವನ್ನು ಸುಲಭವಾಗಿ ಅರ್ಥ ಮಾಡಿಕೊಂಡಿರುವ ಎದುರಾಳಿ ತಂಡದ ಬೌಲರ್‌ಗಳು ಬಂದಷ್ಟೇ ವೇಗದಲ್ಲಿ ಅವರನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸುತ್ತಿದ್ದಾರೆ. ಬರೇ ಫೋರ್, ಸಿಕ್ಸರ್‌ಗಳನ್ನು ಹೊರತುಪಡಿಸಿ , ಸಿಂಗಲ್ ಹಾಗೂ ಎರಡು ರನ್‌ಗಳನ್ನು ಕದಿಯುವ ತಂತ್ರವನ್ನು ಪ್ರಯೋಗಿಸಿದರೆ ಅವರಿಂದ ತಂಡಕ್ಕೆ ಲಾಭ. ತಾವು ಎಡಗೈ ಬ್ಯಾಟ್ಸ್‌ಮನ್ ಆಗಿರುವುದು ಪಂತ್‌ಗೆ ಆಡುವ ೧೧ರ ಬಳಗದಲ್ಲಿ ಅವಕಾಶ ಪಡೆಯಲು ಇರುವ ಸುಲಭದ ಮಾನದಂಡ.
ವೇಗಕ್ಕೆ ಬಲ
ಬುಮ್ರಾ ಹಾಗೂ ಹರ್ಷಲ್ ಆಯ್ಕೆಯಿಂದ ಭಾರತ ತಂಡದ ವೇಗದ ವಿಭಾಗಕ್ಕೆ ಬಲ ಬಂದಿರುವು ನಿಜ. ಅಸ್ಟ್ರೇಲಿಯಾದ ಬೌನ್ಸ್ ಹೆಚ್ಚಾಗುವ ಪಿಚ್‌ಗಳಲ್ಲಿ ಬುಮ್ರಾ ಪ್ರಮುಖ ಅಸ್ತ್ರ ಎನಿಸಿಕೊಳ್ಳಲಿದ್ದಾರೆ. ಪವರ್ ಪ್ಲೇ ಅವಧಿಯಲ್ಲಿ ಅಥವಾ ಡೆತ್ ಓವರ್‌ಗಳಲ್ಲಿ ಅವರು ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಹರ್ಷಲ್ ಮಧ್ಯಮ ಕ್ರಮಾಂಕದಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಯಾಮಾರಿಸಿ ವಿಕೆಟ್ ಪಡೆಯಬಲ್ಲರು. ಭುವನೇಶ್ವರ್ ಕುಮಾರ್ ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿದ್ದು, ಅವರು ಚೆಂಡು ಸ್ವಿಂಗ್ ಆಗುವಾಗ ಲಾಭ ತಂದುಕೊಡಬಲ್ಲರು. ಬುಮ್ರಾ ಹಾಗೂ ಭುವಿ ವೇಗದ ವಿಭಾಗದಲ್ಲಿ ಅನುಭವಿಗಳಾಗಿದ್ದು ವಿಶ್ವ ಕಪ್‌ನಂಥ ಪ್ರತಿಷ್ಠಿತ ಟೂರ್ನಿಗಳಿಗೆ ಇವರ ಉಪಸ್ಥಿತಿ ಅಗತ್ಯ. ಅರ್ಶ್‌ದೀಪ್ ಸಿಂಗ್ ವೇಗದ ಕೋಟಾದಲ್ಲಿ ಆಯ್ಕೆಯಾಗಿರುವ ಇನ್ನೊಬ್ಬರು. ಎಡಗೈ ಬೌಲರ್ ಎಂಬುದು ಅವರ ಆಯ್ಕೆಯ ಮಾನದಂಡ. ಅಲ್ಲದೆ, ಒಂದು ಓವರ್‌ನ ಆರು ಎಸೆತಗಳನ್ನೂ ಯಾರ್ಕರ್ ಆಗಿ ಪರಿವರ್ತಿಸಬಲ್ಲ ಅವರು ಉತ್ತಮ ಬೌಲರ್ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಹೀಗಾಗಿ ೧೫ರ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಸ್ಪಿನ್ ಜೋಡಿ ಇವರು
ರವಿಚಂದ್ರನ್ ಅಶ್ವಿನ್ ಹಾಗೂ ಯಜ್ವೇಂದ್ರ ಚಹಲ್ ೧೫ ಬಳಗಕ್ಕೆ ಆಯ್ಕೆಯಾಗಿರುವ ಸ್ಪಿನ್ ಜೋಡಿ. ಇಬ್ಬರೂ ಪರಿಣಾಮಕಾರಿ ಬೌಲರ್‌ಗಳು. ಅನುಭವಿ ಅಶ್ವಿನ್ ಎದುರಾಳಿ ಬ್ಯಾಟರ್‌ಗಳ ಮೇಲೆ ಸತತವಾಗಿ ಒತ್ತಡ ಹೇರಿ ರನ್ ಬಾರಿಸದಂತೆ ನೋಡಿಕೊಳ್ಳಬಲ್ಲರು. ಯಜ್ವೇಂದ್ರ ಚಹಲ್ ತಮ್ಮ ಮಣಿಕಟ್ಟಿನ ಸ್ಪಿನ್ ಮೂಲಕ ವಿಕೆಟ್ ಪಡೆದು ಆಪತ್ಬಾಂಧವ ಎನಿಸಿಕೊಳ್ಳುತ್ತಾರೆ.
ಮ್ಯಾಚ್ ವಿನ್ನರ್‌ಗಳ ಪಡೆ
ಆಯ್ಕೆಯಾಗಿರುವ ಬಹುತೇಕ ಆಟಗಾರರು ಮ್ಯಾಚ್ ವಿನ್ನರ್‌ಗಳು. ಕೆ. ಎಲ್. ರಾಹುಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಹಲವಾರು ವಿಜಯ ತಂದುಕೊಟ್ಟವರು. ರಿಷಭ್ ಪಂತ್, ದೀಪಕ್ ಹೂಡ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್ ಹಾಗೂ ಅರ್ಶ್ ದೀಪ್ ಸಿಂಗ್ ಸಂದರ್ಭಕ್ಕೆ ತಕ್ಕ ಹಾಗೆ ನೆರವಾಗುವ ನಿರೀಕ್ಷೆಯಿದೆ.
ಮೀಸಲು ಪಡೆಯೂ ಬಲವಾಗಿದೆ
ಮೊಹಮ್ಮದ್ ಶಮಿ, ದೀಪಕ್ ಚಾಹರ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ ಮೀಸಲು ಆಟಗಾರರು. ಇವರಲ್ಲಿ ಮೂವರು ಬೌಲರ್‌ಗಳು. ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟರ್. ಇವರು ಪ್ರಮುಖ ತಂಡದ ಭಾಗವಾಗಿ ಇರುವುದಿಲ್ಲ. ಬಿಸಿಸಿಐ ವೆಚ್ಚದಲ್ಲಿ ಆಸ್ಟ್ರೆಲಿಯಾಕ್ಕೆ ಪ್ರವಾಸ ಮಾಡಲಿದ್ದಾರೆ. ೧೫ರ ಬಳಗದಲ್ಲಿ ಗಾಯ ಅಥವಾ ಇನ್ಯಾವುದೋ ಕಾರಣಕ್ಕೆ ಆಟಗಾರರ ಕೊರತೆ ಎದುರಾದರೆ ಇವರು ಸ್ಥಾನ ಪಡೆದುಕೊಳ್ಳಲಿದ್ದಾರೆ.
ವಿರೋಧ
ಎಂದಿನಂತೆ ಈ ಬಾರಿಯೂ ತಂಡ ಪ್ರಕಟಗೊಂಡ ಬಳಿಕ ಅಭಿಮಾನಿಗಳ ವಿರೋಧ ವ್ಯಕ್ತಗೊಂಡಿವೆ. ಪ್ರಮುಖವಾಗಿ ಕೆ.ಎಲ್ ರಾಹುಲ್, ರಿಷಭ್ ಪಂತ್ ಆಯ್ಕೆ ಬಗ್ಗೆ ಆಕ್ಷೇಪಗಳಿವೆ. ಅವರು ಫಾರ್ಮ್‌ನಲ್ಲಿಲ್ಲ ಎಂಬುದೇ ಅವರೆಲ್ಲರ ವಾದ. ಇನ್ನೂ ಪಂತ್ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡಬಹುದಿತ್ತು ಎಂಬ ಸೋಶಿಯಲ್ ಮೀಡಿಯಾ ಅಭಿಯಾನ ಆರಂಭಗೊಂಡಿದೆ. ಮೊಹಮ್ಮದ್ ಶಮಿಯನ್ನು ಪ್ರಮುಖ ತಂಡಕ್ಕೆ ಸೇರಿಸದೇ ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಿದ ಬಗ್ಗೆಯೂ ಅಸಮಾಧಾನಗಳಿವೆ.
ಎಂದು ವಿಶ್ವ ಕಪ್ ಆರಂಭ?
ಅಕ್ಟೋಬರ್ ೧೬ರಂದು ಟಿ೨೦ ವಿಶ್ವ ಕಪ್ ಆರಂಭವಾಗಲಿದೆ. ಶ್ರೀಲಂಕಾ ಹಾಗೂ ನಮೀಬಿಯಾ ನಡುವೆ ಉದ್ಘಾಟನಾ ಪಂದ್ಯ ನಡೆದರೆ, ನವೆಂಬರ್ ೧೩ರಂದು ಫೈನಲ್ ಪಂದ್ಯ ಆಯೋಜನೆಗೊಂಡಿದೆ.
ಇದನ್ನೂ ಓದಿ | T20 World Cup | ಬುಮ್ರಾ, ಹರ್ಷಲ್ ವಾಪಸ್; ಟಿ20 ವಿಶ್ವ ಕಪ್‌ಗೆ 15 ಸದಸ್ಯರ ಟೀಮ್ ಇಂಡಿಯಾ ಪ್ರಕಟ