Site icon Vistara News

SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

SubAir facility

ಬೆಂಗಳೂರು: ನಾಳೆ ನಡೆಯುವ ಆರ್​ಸಿಬಿ(RCB) ಮತ್ತು ಚೆನ್ನೈ(CSK) ನಡುವಣ ಪಂದ್ಯಕ್ಕೆ ಮಳೆ ಭೀತಿ ಇದ್ದರೂ ಅಭಿಮಾನಿಗಳು ಯಾವುದೇ ಚಿಂತೆ ಪಡುವ ಅಗತ್ಯವಿಲ್ಲ. ಎಷ್ಟೇ ಮಳೆಯಾದರೂ ಕೂಡ ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್‌ ಏರ್‌ ಸಿಸ್ಟಮ್‌(SubAir facility) ತಂತ್ರಜ್ಞಾನ(SubAir facility Chinnaswamy) ಈ ಮೈದಾನದಲ್ಲಿದೆ. ಹೀಗಾಗಿ ಮಳೆ ಬಂದರೂ ಪಂದ್ಯ ನಡೆಯುವುದು ಖಚಿತ.

ಸಬ್‌ ಏರ್‌ ಸಿಸ್ಟಮ್‌ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದ ಗಾಲ್ಫ್ ಸ್ಟೇಡಿಯಂಗಳಲ್ಲಿ ಮಾತ್ರ ಇಂತಹ ಅತ್ಯಾಧುನಿಕ ವ್ಯವಸ್ಥೆ ಇದೆ.

2017ರಲ್ಲಿ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ತಂತ್ರಜ್ಞಾನದ ಪರೀಕ್ಷಾರ್ಥ ಪ್ರದರ್ಶನದ ವೇಳೆ ಸುಮಾರು 5 ಸಾವಿರ ಲೀಟರ್‌ ನೀರನ್ನು ಮೈದಾನಕ್ಕೆ ಹಾಯಿಸಲಾಗಿತ್ತು. ಕೆಲವೇ ಸೆಕೆಂಡ್‌(32 ಸೆ.)ಗಳಲ್ಲಿ ಸಬ್‌ ಏರ್‌ ಸಿಸ್ಟಮ್‌ನ ಯಂತ್ರ ನೀರನ್ನು ಹೀರಿಕೊಂಡಿತ್ತು. ಹುಲ್ಲುಹಾಸಿನ ತಳಮಟ್ಟದಲ್ಲೂ ನೀರಿನ ಅಂಶ ಉಳಿಯದಂತೆ ಹೀರಿಕೊಂಡಿತ್ತು. ಆ ಮೂಲಕ ಎಷ್ಟೇ ಮಳೆ ಬಂದರೂ, ಮಳೆ ನಿಂತ ನಂತರ ಅತಿ ಶೀಘ್ರದಲ್ಲಿ ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಲು ತಾನು ಸಿದ್ಧ ಎಂಬುದನ್ನು ಸಬ್‌ ಏರ್‌ ಸಿಸ್ಟಮ್‌ ವ್ಯವಸ್ಥೆ ನಿರೂಪಿಸಿತ್ತು. ಅಂದಿನ ಪರೀಕ್ಷಾರ್ಥ ಪ್ರದರ್ಶನದ ವಿಡಿಯೊ ಈಗ ವೈರಲ್​ ಆಗುತ್ತಿದೆ.

ಹಳೆಯ ವಿಡಿಯೊ ಈಗ ವೈರಲ್​ ಆಗಲು ಕೂಡ ಒಂದು ಕಾರಣವಿದೆ. ಏಕೆಂದರೆ ನಾಳೆ ನಡೆಯುವ ಆರ್​ಸಿಬಿ ಮತ್ತು ಚೆನ್ನೈ ವಿರುದ್ಧದ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಪ್ಲೇ ಆಫ್​ ಪ್ರವೇಶಕ್ಕೆ ಆರ್​ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಪಂದ್ಯ ನಡೆಯಲಿದೆಯಾ ಎನ್ನುವ ಅನುಮಾನ ಮತ್ತು ಗೊಂದಲ ಆರ್​ಸಿಬಿ ಅಭಿಮಾನಿಗಳಲ್ಲಿ ಮೂಡಿದೆ. ಈ ಕಾರಣದಿಂದ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳುವ ಸಲುವಾಗಿ ಆ ವಿಡಿಯೊ ಈಗ ವೈರಲ್​ ಆಗುತ್ತಿದೆ. ವಿಡಿಯೊ ಕಂಡ ಬಳಿಕ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೊಮ್ಮೆ ಮಳೆಯ ಆರ್ಭಟ ನಿಲ್ಲದೇ ಹೋದಲ್ಲಿ, ಆಗ ಎಷ್ಟೇ ದೊಡ್ಡ ತಂತ್ರಜ್ಞಾನವಿದ್ದರೂ ಇದು ಉಪಯೋಗಕ್ಕೆ ಬಾರದು. ಹೀಗಾಗಿ ಪಂದ್ಯದ ಅಳಿವು ಉಳಿವಿನ ಭವಿಷ್ಯ ಮಳೆಯ ಕೈಯಲ್ಲಿದೆ.

7 ನಿಮಿಷಗಳಲ್ಲಿ ಪಂದ್ಯಕ್ಕೆ ಸಜ್ಜು


4.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಬ್‌ ಏರ್‌ ಸಿಸ್ಟಮ್‌ ವ್ಯವಸ್ಥೆಯಿಂದಾಗಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಚಿನ್ನಸ್ವಾಮಿಯಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ.

ಇದನ್ನೂ ಓದಿ RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

ಸಬ್‌ ಏರ್‌ ಸಿಸ್ಟಮ್‌ ಯಂತ್ರವನ್ನು ನಿಭಾಯಿಸಲು ಕೆಎಸ್‌ಸಿಎ ಕ್ಯುರೇಟರ್‌ಗಳಿಗೂ ವಿಶೇಷ ತರಬೇತಿ ನೀಡಲಾಗಿದೆ. ಮೈದಾನದ ಕೆಲವೆಡೆ ರಿಮೋಟ್‌ ಸೆನ್ಸರ್‌ಗಳನ್ನು ಕೂಡ ಅಳವಡಿಸಲಾಗಿದ್ದು, ಒಂದು ವೇಳೆ ಕ್ರೀಡಾಂಗಣದಲ್ಲಿ ಸಿಬ್ಬಂದಿ ಇಲ್ಲದಿರುವಾಗ ಅಥವಾ ಮಧ್ಯರಾತ್ರಿ ಮಳೆ ಸುರಿದರೆ ಮನೆಯಲ್ಲೇ ಕುಳಿತು ಯಂತ್ರಕ್ಕೆ ಚಾಲನೆಯನ್ನೂ ನೀಡಬಹುದಾಗಿದೆ.

ಸಬ್‌ ಏರ್‌ ಸಿಸ್ಟಮ್‌ ವಿಶೇಷತೆ

1. ಮಳೆ ಆರಂಭವಾದ ಕ್ಷಣದಿಂದ ಪ್ರತಿ ನಿಮಿಷಕ್ಕೆ 10 ಸಾವಿರ ಲೀಟರ್‌ ವೇಗದಲ್ಲಿ ಈ ಯಂತ್ರ ಮೈದಾನದಿಂದ ನೀರನ್ನು ಹೀರಿಕೊಳ್ಳುತ್ತದೆ.

2. ಈ ಹಿಂದಿನ ಚರಂಡಿ ವ್ಯವಸ್ಥೆಗಿಂತ 36 ಪಟ್ಟು ವೇಗದಲ್ಲಿ ನೀರನ್ನು ಮೈದಾನದಿಂದ ಖಾಲಿ ಮಾಡುತ್ತದೆ.

3. ಎಷ್ಟೇ ಮಳೆಯಾದರೂ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಮೈದಾನ ಪಂದ್ಯಕ್ಕೆ ಸಜ್ಜು

Exit mobile version