ನವ ದೆಹಲಿ: ನಾಗರಿಕ ಸೇವೆಗಳಿಗೆ ನೇಮಕ ನಡೆಸುವ ಪರೀಕ್ಷೆಗಳನ್ನು ದೀರ್ಘ ಅವಧಿಯ ತನಕ ನಡೆಸದಂತೆ ನಾಗರಿಕ ಸೇವಾ ಆಯೋಗಕ್ಕೆ (Public Service Commission) ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ನಿಧಾನಗತಿಯಲ್ಲಿ ಪ್ರಕ್ರಿಯೆ ಮುಗಿಸುವುದರಿಂದ ಅಭ್ಯರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಿಂದಾಗಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಹಿಂಜರಿಯುತ್ತಿದ್ದಾರೆ ಎಂಬುದಾಗಿ ಸಮಿತಿಯ ತನ್ನ ಸಲಹೆಗೆ ಕಾರಣ ಕೊಟ್ಟಿದೆ.
ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಎಂದು ಮೂರು ಹಂತದಲ್ಲಿ ಯುಪಿಎಸ್ಸಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಂದು ಬಾರಿ ದಿನಾಂಕ ಪ್ರಕಟಿಸಿ ಪರೀಕ್ಷೆ ನಡೆದು ಸಂದರ್ಶನಗಳು ಮುಗಿಸಲು 15 ತಿಂಗಳು ತೆಗೆದುಕೊಳ್ಳಲಾಗುತ್ತದೆ. ಇದು ದೀರ್ಘ ಅವಧಿಯಾಗಿದ್ದು ಇದರಿಂದ ಪರೀಕ್ಷೆ ಬರೆಯಲು ಮುಂದಾಗುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ವ್ಯವಹಾರಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ : 7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ
ನೇಮಕ ಪರೀಕ್ಷೆಗಳು ಆರು ತಿಂಗಳು ಅವಧಿಯೊಳಗೆ ಮುಗಿಯಬೇಕು. ಪರೀಕ್ಷೆಗಳ ಅವಧಿ ಹೆಚ್ಚಾಗುವ ಮೂಲಕ ಅಭ್ಯರ್ಥಿಗಳ ಜೀವಿತಾವಧಿಯ ಪ್ರಮುಖ ಘಟ್ಟ ನಷ್ಟವಾಗುತ್ತದೆ. ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಯುಪಿಎಸ್ಸಿ ಪರೀಕ್ಷೆಗಳ ಅವಧಿ ಕುಂಠಿತಗೊಳಿಸುವುದು ಅನಿವಾರ್ಯ ಎಂದು ಹೇಳಿದೆ.
ಪಾಲ್ಗೊಳ್ಳುವಿಕೆ ಕುಸಿತ
2022-23ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಗೆ 32. 39 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಪರೀಕ್ಷೆ ಬರೆದಿರುವುದು 16.82 ಲಕ್ಷ ಮಂದಿ ಮಾತ್ರ. ದೀರ್ಘ ಪ್ರಕ್ರಿಯೆಯಿಂದಾಗಿ ಅಭ್ಯರ್ಥಿಗಳು ಆಸಕ್ತಿ ಕಳೆದುಕೊಂಡ ಕಾರಣ ಅರ್ಧದಷ್ಟು ಅರ್ಜಿದಾರರು ಮಾತ್ರ ಪರೀಕ್ಷೆ ಬರೆದಿದ್ದಾರೆ. ಇದೇ ಅವಧಿಯಲ್ಲಿ ನಡೆದ ನಾಗರಿಕ ಸೇವಾ ಪರೀಕ್ಷೆಗೂ 11.35 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿ 5.73 ಲಕ್ಷ ಮಂದಿ ಮಾತ್ರ ಪರೀಕ್ಷೆ ಬರೆದಿದ್ದಾರೆ. ಈ ಪ್ರವೃತ್ತಿಗೆ ಯಾವುದೋ ಹಿನ್ನೆಲೆಯಿದೆ. ಅವುಗಳ ಬಗ್ಗೆಯೂ ಅಧ್ಯಯನ ನಡೆಸುವುದು ಅಗತ್ಯ ಎಂದು ಸಮಿತಿ ಸಲಹೆ ಕೊಟ್ಟಿದೆ.
ನಾಗರಿಕ ಸೇವಾ ಆಯೋಗವು ಐಎಎಸ್, ಐಪಿಎಸ್, ಐಅರ್ಎಸ್ ಸೇರಿದಂತೆ ಪ್ರಮುಖ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಪರೀಕ್ಷೆಗಳು ಕಠಿಣವಾಗಿರುತ್ತವೆ ಹಾಗೂ ಪಾಸಾಗುವುದು ಕೂಡ ಸವಾಲು. ಅದಕ್ಕಿಂತ ಹೆಚ್ಚಾಗಿ ಅದು ದೀರ್ಘ ಅವಧಿಯಲ್ಲಿ ನಡೆಯುವ ಕಾರಣ ಅಷ್ಟು ದಿನಗಳ ಕಾಲ ದುಡಿಮೆ ಇಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೆಲವರು ಪರೀಕ್ಷೆಗಳನ್ನು ಬರೆಯಲು ಮುಂದಾಗುವುದಿಲ್ಲ.