ಹೈದರಾಬಾದ್: ಶನಿವಾರ ನಡೆಯುವ ಐಪಿಎಲ್ನ ಡಬಲ್ ಹೆಡರ್ನ ಹಗಲು ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಣಕ್ಕಿಳಿಯಲಿವೆ. ಪ್ಲೇ ಆಫ್ ಹಾದಿ ಹಿಡಿಯುವ ನಿಟ್ಟಿನಲ್ಲಿ ಉಭಯ ತಂಡಗಳಿಗು ಇದು ಮಹತ್ವದ ಪಂದ್ಯದವಾಗಿದೆ. ಹೀಗಾಗಿ ಈ ಪಂದ್ಯವನ್ನು ಹೈ ವೋಲ್ಟೇಜ್ ಎಂದು ನಿರೀಕ್ಷೆ ಮಾಡನಹುದು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇತ್ತಂಡಗಳ ಹೋರಾಟ ನಡೆಯಲಿದೆ. ಹೈದರಾಬಾದ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೆ, ಲಕ್ನೋ ತಂಡ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಪಂದ್ಯದ ಲೆಕ್ಕಾಚಾರದಲ್ಲಿ ಹೈದರಾಬಾದ್ ಕಡಿಮೆ ಪಂದ್ಯ ಆಡಿದೆ. ಲಕ್ನೋಗೆ ಇದು 12ನೇ ಪಂದ್ಯವಾದರೆ ಹೈದರಾಬಾದ್ 11ನೇ ಪಂದ್ಯ.
ಹೈದರಾಬಾದ್ ತಂಡದ ದುರಂತವೆಂದರೆ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಅವರು ಕೆಕೆಆರ್ ವಿರುದ್ಧ ಆಡಿದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಆದರೆ ಈ ಶತಕದ ಬಳಿಕ ಬ್ರೂಕ್ ಬ್ಯಾಟಿಂಗ್ ವೈಫಲ್ಯ ಕಾಣುತ್ತ ಹೋದರು. ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಪ್ರಯೋಗವನ್ನೂ ಮಾಡಲಾಯಿತು. ಇದು ಕೂಡ ಕ್ಲಿಕ್ ಆಗಲಿಲ್ಲ. ಇವರ ಸ್ಥಾನದಲ್ಲಿ ಇನಿಂಗ್ಸ್ ಆರಂಭಿಸಿದ ಅಗರ್ವಾಲ್ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುತ್ತಿಲ್ಲ. ಉಳಿದಂತೆ ನಾಯಕ ಏಡನ್ ಮಾರ್ಕ್ರಮ್, ರಾಹುಲ್ ತ್ರಿಪಾಠಿ ಕೂಡ ವೈಫಲ್ಯ ಕಾಣುತ್ತಿದ್ದಾರೆ. ಒಟ್ಟಾರೆ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಆಗದ ಹೊರತು ಹೈದರಾಬಾದ್‌ಗೆ ಗೆಲುವು ಅಸಾಧ್ಯ. ಬೌಲಿಂಗ್ ವಿಭಾಗದಲ್ಲಿ ಹೈದರಾಬಾದ್ ಉತ್ತಮವಾಗಿ ಗೋಚರಿಸಿದೆ. ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಮಾರ್ಕೋ ಜಾನ್ಸೆನ್ ಮತ್ತು ಉಮ್ರಾನ್ ಮಲಿಕ್ ಉತ್ತಮ ಲಯದಲ್ಲಿದ್ದಾರೆ.
ಇದನ್ನೂ ಓದಿ IPL 2023: ಜೈಸ್ವಾಲ್ ಆಟಕ್ಕೆ ಫಿದಾ ಆದ ವಿರಾಟ್ ಕೊಹ್ಲಿ
ನಾಯಕ ರಾಹುಲ್ ಅವರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದು ಆಘಾತದಲ್ಲಿರುವ ಲಕ್ನೋ ತಂಡಕ್ಕೆ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ರಾಹುಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕೃಣಾಲ್ ಪಾಂಡ್ಯ ಅವರು ತಮ್ಮ ಹಾರ್ದಿಕ್ ಪಾಂಡ್ಯರಂತೆ ಉತ್ತಮ ಯೋಜನೆ ರೂಪಿಸಬೇಕಿದೆ. ಗುಜರಾತ್ ವಿರುದ್ಧ ಆಡುವ ಮೂಲಕ ಈ ಆವೃತ್ತಿಯ ಮೊದಲ ಐಪಿಎಲ್ ಪಂದ್ಯವನ್ನಾಡಿದ ಕ್ವಿಂಟನ್ ಡಿ ಕಾಕ್ ಅವರ ಮೇಲೆ ತಂಡ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಇರಿಸಿದೆ. ಆರಂಭಿಕ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರಣ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರ ಬ್ಯಾಟ್ ಇದೀಗ ಸದ್ದು ಮಾಡುತ್ತಿಲ್ಲ. ಇನ್ನೊಂದೆಡೆ ಆಡಿದ 11 ಪಂದ್ಯದಲ್ಲಿಯೂ ಕೇವಲ ಸಿಂಗಲ್ ಡಿಜಿಟ್ಗೆ ಸೀಮಿತರಾದ ದೀಪಕ್ ಹೂಡ ಅವರನ್ನು ಈ ಪಂದ್ಯದಲ್ಲಿ ಕೈ ಬಿಡದಿದ್ದರೆ ಲಕ್ನೋ ತಂಡಕ್ಕೆ ಮತ್ತೊಂದು ಸೋಲು ಖಚಿತ ಎನ್ನಲಡ್ಡಿಯಿಲ್ಲ. ಇವರ ಜತೆಗೆ ಯಾವುದೇ ಬೌಲಿಂಗ್ ಆವೇಶವಿಲ್ಲದ ಆವೇಶ್ ಖಾನ್ ಅವರನ್ನು ಈ ಪಂದ್ಯದಿಂದ ಹೊರಗಿಟ್ಟರೆ ಒಲಿತು ಎನ್ನುವುದು ಲಕ್ನೋ ಅಭಿಮಾನಿಗಳ ಕೂಗಾಗಿದೆ.
ಸಂಭಾವ್ಯ ತಂಡ
ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ, ಆಯುಷ್ ಬದೋನಿ, ಮಾರ್ಕಸ್ ಸ್ಟೊಯ್ನಿಸ್, , ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ (ನಾಯಕ), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅಮಿತ್ ಮಿಶ್ರಾ.
ಸನ್ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಅಭಿಷೇಕ್ ಶರ್ಮಾ/ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್.