Site icon Vistara News

IPL 2022 : ಮುಂಬೈ ಇಂಡಿಯನ್ಸ್​ಗೆ 14 ರನ್​ಗಳಿಂದ ಮಣಿದ ಸನ್​ ರೈಸರ್ಸ್​ ಹೈದರಾಬಾದ್​

#image_title

ಹೈದರಾಬಾದ್​ : ಬ್ಯಾಟರ್​ಗಳ ಸಂಘಟಿತ ಹೋರಾಟದ ನೆರವು ಪಡೆದ ಮುಂಬಯಿ ಇಂಡಿಯನ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಸನ್ ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ 14 ರನ್​ಗಳ ವಿಜಯ ಸಾಧಿಸಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್​ ಬಳಗ ಹ್ಯಾಟ್ರಿಕ್​ ವಿಜಯದ ಸಾಧನೆ ಮಾಡಿತು. ಈ ಹಿಂದೆ ಡೆಲ್ಲಿ ಕ್ಯಾಪಿಲಟ್ಸ್ ಹಾಗೂ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ಮುಂಬಯಿ ಬಳಗ ವಿಜಯ ಸಾಧಿಸಿತ್ತು. ಕ್ಯಾಮೆರಾನ್​ ಗ್ರೀನ್ (64 ರನ್​, 40 ಎಸೆತ, 2 ಸಿಕ್ಸರ್​, 6 ಫೋರ್​​) ಅರ್ಧ ಶತಕ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು. ಅದೇ ರೀತಿ ಟಿಮ್​ ಡೇವಿಡ್​ ನಾಲ್ಕು ಕ್ಯಾಚ್​ ಹಿಡಿದು ಒಂದು ರನ್​ ಔಟ್​ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಲ್ಲಿನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಎಸ್​ಆರ್​​ಎಚ್​ ತಂಡ ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲ ಬ್ಯಾಟ್​ ಮಾಡಿದ ರೋಹಿತ್ ಶರ್ಮಾ ನೇತೃತ್ವದ ಮುಂಬಯಿ ಬಳಗ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 195 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಹೈದರಾಬಾದ್​ ತಂಡ 19.5 ಓವರ್​ಗಳಲ್ಲಿ 178 ರನ್​ಗಳಿಗೆ ಆಲ್​ಔಟ್​ ಆಯಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟು ಹೊರಟ ಹೈದರಾಬಾದ್ ತಂಡದ ಬ್ಯಾಟಿಂಗ್ ಕೆಚ್ಚೆದೆ ಪ್ರದರ್ಶಿಸಲಿಲ್ಲ. ಮಯಾಂಕ್ ಅಗರ್ವಾಲ್ 48 ರನ್ ಬಾರಿಸಿದರೂ ಗುರಿ ಮುಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹೆನ್ರಿನ್​ ಕ್ಲಾಸೆನ್​ (36) ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರೂ ಅದರಿಂದ ತಂಡಕ್ಕೆ ಹೆಚ್ಚು ಪ್ರಯೋಜನವಾಗಲಿಲ್ಲ. ಉಳಿದವರಿಂದ ತಂಡಕ್ಕೆ ಅಲ್ಪ ಸ್ವಲ್ಪ ನೆರವು ಸಿಕ್ಕಿತೇ ಹೊರತು ಗೆಲುವು ಲಭಿಸಲಿಲ್ಲ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ; ಆರೋಪಿಗೆ ಬಿಗ್​ ರಿಲೀಫ್ ನೀಡಿದ ಬಾಂಬೆ ಹೈಕೋರ್ಟ್‌

ಬ್ಯಾಟಿಂಗ್​ ಆರಂಭಿಸಿದ ಮುಂಬಯಿ ಇಂಡಿಯನ್ಸ್​ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ರೋಹಿತ್​ ಶರ್ಮಾ 28 ರನ್​ಗಳಿಗೆ ಟಿ ನಟರಾಜನ್​ಗೆ ವಿಕೆಟ್​ ಒಪ್ಪಿಸಿದರು. ಹೀಗಾಗಿ 1 ವಿಕೆಟ್​ ಕಳೆದುಕೊಂಡು 41 ರನ್​ ಬಾರಿಸಿತು. ಮತ್ತೊಂದು ಬದಿಯಲ್ಲಿ ಇಶಾನ್​ ಕಿಶನ್​ ನಿಧಾನಗತಿಯಲ್ಲಿ ಆಡಿ 31 ಎಸೆತಗಳಿಗೆ 38 ರನ್ ಬಾರಿಸಿ ಔಟಾದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್​ ಯಾದವ್​ ಮತ್ತೆ ವೈಫಲ್ಯ ಕಂಡರಲ್ಲದೆ, 7 ರನ್​ ಬಾರಿಸಿ ಔಟಾದರು. ಎಸ್​ಆರ್​ಎಚ್​ ತಂಡದ ನಾಯಕ ಏಡೆನ್​ ಮಾರ್ಕ್ರಮ್​ ಹಿಡಿದ ಅದ್ಭುತ ಕ್ಯಾಚ್​ಗೆ ಅವರು ಬಲಿಯಾದರು. ಯುವ ಬ್ಯಾಟರ್ ತಿಲಕ್​ ವರ್ಮಾ ಈ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದರು. 17 ಎಸೆತಗಳಿಗೆ 2 ಫೋರ್​ 4 ಸಿಕ್ಸರ್​​​ಗಳ ಸಮೇತ 37 ರನ್​ ಬಾರಿಸಿ ಔಟಾದರು.

ಗ್ರಿನ್​ ಅಬ್ಬರ

ಮುಂಬೈ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಕ್ಯಾಮೆರಾನ್​ ಗ್ರೀನ್​ ಅಬ್ಬರದ ಪ್ರದರ್ಶನ ನೀಡಿದರು. ಎಸ್​​ಆರ್​ಎಚ್​ ಬೌಲರ್​ಗಳನ್ನು ಸತತವಾಗಿ ದಂಡಿಸಿದ ಅವರು 64 ರನ್ ಬಾರಿಸಿ ಮುಂಬೈ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು. ತಿಲಕ್​ ವರ್ಮಾ (37) ಹಾಗೂ ಇಶಾನ್​ ಕಿಶನ್​ (38) ತಮ್ಮ ಕೊಡುಗೆಗಳನ್ನು ಕೊಟ್ಟರು. ಹೈದರಾಬಾದ್ ತಂಡದ ಪರ ನಾಯಕ ಏಡೆನ್​ ಮಾರ್ಕ್ರಮ್​ ಮೂರು ಅಧ್ಬುತ ಕ್ಯಾಚ್​ಗಳನ್ನು ಹಿಡಿದು ಮಿಂಚಿದರು.

Exit mobile version