Site icon Vistara News

IPL 2023 : 121 ರನ್​ಗಳ ಸಾಧಾರಣ ಮೊತ್ತ ಬಾರಿಸಿದ ಸನ್​ರೈಸರ್ಸ್​ ಹೈದರಾಬಾದ್

#image_title

ಲಖನೌ: ಐಪಿಎಲ್ 16ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜಯಂಟ್ಸ್ ವಿರುದ್ಧ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 121 ರನ್​ ಬಾರಿಸಿದೆ. ಇದರೊಂದಿಗೆ ಲಕ್ನೊ ತಂಡದ ಗೆಲುವಿಗೆ ಸಾಧಾರಣ ಗುರಿ ಎದುರಾಗಿದೆ. ಹೈದರಾಬಾದ್​ ತಂಡದ ಬಹುತೇಕ ಬ್ಯಾಟರ್​ಗಳು ವೈಫಲ್ಯ ಎದುರಿಸಿದ್ದು, ರಾಹುಲ್ ತ್ರಿಪಾಠಿ (34) ಹಾಗೂ ಆರಂಭಿಕ ಬ್ಯಾಟರ್​ ಅನ್ಮೋಲ್​ಪ್ರೀತ್​ ಸಿಂಗ್​ (31) ಸ್ವಲ್ಪ ಮಟ್ಟಿಗೆ ಪೈಪೋಟಿ ಒಡ್ಡಿದರು.

ಇಲ್ಲಿನ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡ ದೊಡ್ಡ ಮೊತ್ತ ಪೇರಿಸುವ ಗುರಿಯನ್ನು ವ್ಯಕ್ತಪಡಿಸಿದ್ದರೂ, ಲಕ್ನೊ ಬೌಲರ್​​ಗಳು ಅದಕ್ಕೆ ಅವಕಾಶ ನೀಡಲಿಲ್ಲ.

ಲಕ್ನೊ ಪರ ಉತ್ತಮ ಪ್ರದರ್ಶನ ನೀಡಿದವರು

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ಪರ ಆರಂಭಿಕರಾಗಿ ಬ್ಯಾಟ್​ ಮಾಡಲು ಇಳಿದ ಕನ್ನಡಿಗ ಮಯಾಂಕ್ ಅಗರ್ವಾಲ್​ ಮತ್ತೊಮ್ಮೆ ವೈಫಲ್ಯ ಕಂಡರು. 7 ಎಸೆತಗಳಲ್ಲಿ 8 ರನ್​ ಬಾರಿಸಿದ ಅವರು ಪೆವಿಲಿಯನ್​ ಕಡೆಗೆ ಮರಳಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್​ ಸ್ವಲ್ಪ ಹೊತ್ತು ಕ್ರೀಸ್​ ಕಾಯ್ದುಕೊಂಡರೂ ಅವರೂ ಟಿ20 ಮಾದರಿಗೆ ಪೂರಕವಾಗಿ ಬ್ಯಾಟ್​ ಬೀಸಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬಂದ ರಾಹುಲ್​ ತ್ರಿಪಾಠಿಯೂ ನಿಧಾನಗತಿಯ ಬ್ಯಾಟಿಂಗ್ ಶೈಲಿಯನ್ನು ಒಪ್ಪಿಕೊಂಡರು.

ಇವೆಲ್ಲದರ ನಡುವೆ ಹೈದರಾಬಾದ್ ತಂಡದ ಆಟಗಾರರು ಲಕ್ನೊ ಸ್ಪಿನ್ನರ್​ಗಳ ಜಾಲಕ್ಕೆ ಬೀಳಲು ತೊಡಗಿದರು. ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ನಾಯಕ ಏಡೆನ್​ ಮಾರ್ಕ್ರಮ್​ ಶೂನ್ಯಕ್ಕೆ ಔಟಾದರೆ, ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್​ ಹ್ಯಾರಿ ಬ್ರೂಕ್​ 3 ರನ್​ಗೆ ಸೀಮಿತಗೊಂಡರು.

ಸತತವಾಗಿ ವಿಕೆಟ್​ಗಳು ಪತನಗೊಂಡ ಬಳಿಕ ರಾಹುಲ್ ತ್ರಿಪಾಠಿ ಹಾಗೂ ವಾಷಿಂಗ್ಟನ್​ ಸುಂದರ್​ (16) ನಿಧಾನಗತಿಯಲ್ಲಿ ಆಡಲು ಆರಂಭಿಸಿದರು. ಈ ಜೋಡಿ ಆರನೇ ವಿಕೆಟ್​ಗೆ 39 ರನ್​ ಬಾರಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ಆಧಾರವಾದರು. ತ್ರಿಪಾಠಿ ವಿಕೆಟ್​ ಪತನಗೊಂಡ ಸ್ವಲ್ಪ ಹೊತ್ತಿನಲ್ಲೇ ವಾಷಿಂಗ್ಟನ್​ ಸುಂದರ್ ಕೂಡ ಪೆವಿಲಿಯನ್​ಗೆ ಮರಳಿದರು ಆ ಬಳಿಕ ಹೈದರಾಬಾದ್ ತಂಡದ ಎರಡು ವಿಕೆಟ್​ಗಳು ಉರುಳಿದವು.

ಇದನ್ನೂ ಓದಿ : IPL 2023 : ಕೈಬೆರಳಿಗೆ ಗಾಯ, ಜೋಸ್​ ಬಟ್ಲರ್​ ಮುಂದಿನ ಪಂದ್ಯಕ್ಕೆ ಅಲಭ್ಯ?

ಕೊನೇ ಹಂತದಲ್ಲಿ ಭರ್ಜರಿಯಾಗಿ ಬ್ಯಾಟ್​ ಬೀಸಿದ ಅಬ್ದುಲ್​ ಸಮದ್​ 10 ಎಸೆತಗಳಿಗೆ 21 ರನ್​ ಬಾರಿಸಿದರು. ಅವರಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಫೋರ್ ಸೇರಿಕೊಂಡಿತ್ತು.

ಲಕ್ನೊ ತಂಡದ ಪರ ಬೌಲಿಂಗ್​ನಲ್ಲಿ ಕೃಣಾಲ್​ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. 4 ಓವರ್​ಗಳ ಸ್ಪೆಲ್​ನಲ್ಲಿ 18 ರನ್​ ನೀಡಿ 3 ವಿಕೆಟ್​ ಕಬಳಿಸಿದ ಅವರು ಲಕ್ನೊ ತಂಡದ ಮುನ್ನಡೆಗೆ ಕಾರಣರಾದರು. ರವಿ ಬಿಷ್ಣೋಯಿ ಹಾಗೂ ಯಶ್​ ಠಾಕೂರ್​ ತಲಾ ಒಂದು ವಿಕೆಟ್​ ತಮ್ಮದಾಗಿಸಿಕೊಂಡರೆ ಅಮಿತ್​ ಮಿಶ್ರಾ 4 ಓವರ್​ಗಳಲ್ಲಿ 23 ರನ್​ ನೀಡಿ 2 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version