Site icon Vistara News

AIFF BAN | ಫುಟ್ಬಾಲ್‌ ಒಕ್ಕೂಟದ ವಿಚಾರಣೆ ಮುಂದೂಡಿದ ಸುಪ್ರೀಮ್‌ ಕೋರ್ಟ್‌

AIFF BAN

ನವ ದೆಹಲಿ : ಅಖಿಲ ಭಾರತ ಫುಟ್ಲಬಾಲ್‌ ಒಕ್ಕೂಟದ (AIFF BAN) ಚುನಾವಣೆ ಕುರಿತು ವಿಚಾರಣೆಯನ್ನು ಸುಪ್ರೀಮ್‌ ಕೋರ್ಟ್‌ ಆಗಸ್ಟ್‌ ೨೨ಕ್ಕೆ ಮುಂದೂಡಿಕೆ ಮಾಡಿದೆ. ಈ ವೇಳೆ ಕೋರ್ಟ್‌ ಮುಂಬರುವ ೧೭ರ ವಯೋಮಿತಿಯ ಮಹಿಳೆಯರ ಫುಟ್ಬಾಲ್‌ ಆತಿಥ್ಯಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವುದಕ್ಕೆ ಸಾಲಿಸಿಟರ್‌ ಜನರಲ್‌ಗೆ ಕಿವಿ ಮಾತ ಹೇಳಿದೆ.

ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟಕ್ಕೆ ನಿಷೇಧ ಹೇರಿ ಮಂಗಳವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ ಒಕ್ಕೂಟ (ಫಿಫಾ ) ಪ್ರಕಟಣೆ ಹೊರಡಿಸಿದೆ ಬಳಿಕ, ಪ್ರಕರಣವನ್ನು ಬೇಗ ಇತ್ಯರ್ಥಗೊಳಿಸುವಂತೆ ಕೇಂದ್ರ ಸರಕಾರ ಸುಪ್ರೀಮ್‌ ಕೋರ್ಟ್‌ ಮೊರೆ ಹೋಗಿತ್ತು. ನಿಷೇಧದ ಜತೆಗೆ ೧೭ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್‌ ಅಯೋಜನೆಯ ಆತಿಥ್ಯವನ್ನು ಹಿಂಪಡೆಯುವುದಾಗಿ ಫಿಫಾ ಬೆದರಿಕೆ ಒಡ್ಡಿರುವುದು ಕೂಡ ಪ್ರಕರಣವನ್ನು ಬೇಗ ಇತ್ಯರ್ಥ ಮಾಡುವಂತೆ ಕೇಂದ್ರ ಸರಕಾರ ಸುಪ್ರೀಮ್‌ ಕೋರ್ಟ್‌ಗೆ ಮನವಿ ಮಾಡಿತ್ತು. ಅಂತೆಯೇ ಬುಧವಾರ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಕೋರ್ಟ್‌ ವಿಚಾರಣೆ ಮುಂದೂಡುವ ಜತೆಗೆ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ವಿಶ್ವ ಕಪ್ ಆತಿಥ್ಯ ಕೈ ತಪ್ಪದಂತೆ ನೋಡಿಕೊಳ್ಳಲು ಹೇಳಿದೆ.’

ಘಟನೆಗೆ ಫಿಫಾದ ಮಾಜಿ ಅಧ್ಯಕ್ಷ ಪ್ರಫುಲ್ ಪಟೇಲ್‌ ಅವರೇ ಕಾರಣ ಎಂದು ಹೇಳಲಾಗುತ್ತಿದ್ದು, ತಮಗೆ ಅಧಿಕಾರ ಸಿಗುವುದಿಲ್ಲ ಎಂದು ಗೊತ್ತಾದ ತಕ್ಷಣ ಫುಟ್ಬಾಲ್ ಒಕ್ಕೂಟದ ಮರ್ಯಾದೆ ಕಳೆಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.’

ಕೋರ್ಟ್‌ ಸೂಚನೆಯೇನು?

ಭಾರತದ ಫುಟ್ಬಾಲ್‌ ಆಡಳಿತದಲ್ಲಿ ಹೊರಗಿನವರು ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಎಐಎಫ್‌ಎಫ್‌ ಮೇಲೆ ಫಿಫಾ ನಿಷೇಧ ಹೇರಿದೆ. ಅಲ್ಲದೆ, ಅಂಡರ್‌ ೧೭ ಮಹಿಳಾ ಫುಟ್‌ಬಾಲ್‌ ವಿಶ್ವಕಪ್‌ ವಿದೇಶಕ್ಕೆ ಸ್ಥಳಾಂತರ ಫಿಫಾ ತೀರ್ಮಾನಿಸಿದೆ. ಇದರ ಜತೆಗೆ ಸದ್ಯಕ್ಕೆ ಯಾವುದೇ ಅಂತಾರಾಷ್ಟ್ರೀಯ ತಂಡದ ಜತೆ ಭಾರತ ಫುಟ್ಬಾಲ್‌ ಆಡುವಂತಿಲ್ಲ ಎಂದಿದೆ. ಸುಪ್ರೀಂ ಕೋರ್ಟ್‌ ನೇಮಿಸಿರುವ ಆಡಳಿತ ಮಂಡಳಿ (ಸಿಒಎ) ರದ್ದಾದ ಬಳಿಕವೇ ನಿಷೇಧ ಹಿಂಪಡೆಯುವುದಾಗಿ ಫಿಫಾ ತಿಳಿಸಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಗೆ ಹಿನ್ನಡೆಯಾದಂತಾಗಿದೆ.

ಹಾಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. “ಫಿಫಾ ನಿಷೇಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು ಈ ಕುರಿತು ಕ್ರಮ ತೆಗೆದುಕೊಳ್ಳುತ್ತಿದೆ. ಅಂಡರ್‌ ೧೭ ವಿಶ್ವಕಪ್‌ ಆಯೋಜನೆ ಕುರಿತು ಫಿಪಾ ಜತೆ ಮಾತುಕತೆ ನಡೆಯುತ್ತಿದೆ,” ಎಂದು ಸುಪ್ರೀಂ ಕೋರ್ಟ್‌ಗೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಿಳಿಸಿದರು.

Exit mobile version