ನವ ದೆಹಲಿ : ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ನಿಷೇಧ (AIFF BAN) ಹಾಗೂ ಸಂಬಂಧಿಸಿದ ಇನ್ನಿತರ ಬೆಳವಣಿಗೆ ಹಿನ್ನೆಲೆಯಲ್ಲಿ , ಒಕ್ಕೂಟದ ಮೇಲ್ವಿಚಾರಣೆ ನಡೆಸುತ್ತಿರುವ ಆಡಳಿತಾತ್ಮಕ ಸಮಿತಿಯನ್ನು (committee of Administration ) ವಿಸರ್ಜನೆ ಮಾಡುವಂತೆ ಸುಪ್ರೀಮ್ ಕೋರ್ಟ್ ಸೋಮವಾರ ಸೂಚನೆ ನೀಡಿದೆ. ವಿಶ್ರಾಂತ ನ್ಯಾಯಮೂರ್ತಿ ಎ. ಆರ್ ಧವೆ ನೇತೃತ್ವದ ಸಮಿತಿ ೨೦೨೦ರಿಂದ ಒಕ್ಕೂಟದ ಮೇಲ್ವಿಚಾರಣೆ ಮಾಡುತ್ತಿತ್ತು.
ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ಎ.ಎಸ್ ಬೋಪಣ್ಣ ಅವರಿದ್ದ ನ್ಯಾಯಪೀಠ, ಆಗಸ್ಟ್ ೨೮ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಒಂದು ವಾರಗಳ ಕಾಲ ಮುಂದೂಡಿಕೆ ಮಾಡಿತಲ್ಲದೆ, ಎಲೆಕ್ಟ್ರಲ್ ಕೊಲಾಜ್ ಹಾಗೂ ನಾಮಪತ್ರ ಪ್ರಕ್ರಿಯೆಯನ್ನು ಬದಲಾಯಿಸಲು ಅವಕಾಶ ನೀಡಿತು. ಇದೇ ವೇಳೆ ಕೋರ್ಟ್, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿ ೩೬ ಪ್ರತಿನಿಧಿಗಳ ನಡುವೆ ಚುನಾವಣೆಯು ನಡೆಯಬೇಕು ಎಂದು ಸೂಚನೆ ನೀಡಿತು.
ಕೇಂದ್ರದ ಮನವಿ
ಈಗಾಗಲೇ ನೀಡಿರುವ ಆದೇಶವನ್ನು ಮಾರ್ಪಾಟು ಮಾಡಿ ಪರ್ಯಾಯ ಆದೇಶ ನೀಡುವಂತೆ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಕೋರ್ಟ್ ಹೊಸ ಆದೇಶಗಳನ್ನು ಪ್ರಕಟಿಸಿತು. ಈ ಮೂಲಕ ಎಐಎಫ್‌ಎಫ್ ಮೇಲೆ ಆಡಳಿತಾತ್ಮಕ ಸಮಿತಿಯ ಅಧಿಕಾರ ಮೊಟಕುಗೊಂಡಿತು. ಹಂಗಾಮಿ ಕಾರ್ಯದರ್ಶಿ ಇನ್ನು ಮುಂದೆ ಒಕ್ಕೂಟದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲಿದೆ.
ಎಐಎಫ್‌ಎಫ್‌ನ ಕಾರ್ಯಕಾರಿ ಸಮಿತಿಯು ೨೩ ಸದಸ್ಯರನ್ನು ಒಳಗೊಂಡಿರಲಿದ್ದು, ಅದರಲ್ಲಿ ಆರು ಆಟಗಾರರು ಇರಬೇಕು. ಆಟಗಾರರಲ್ಲಿಯೂ ಮಹಿಳೆಯರಿಬ್ಬರು ಇರಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ | AIFF BAN | ಫುಟ್ಬಾಲ್ ಒಕ್ಕೂಟದ ವಿಚಾರಣೆ ಮುಂದೂಡಿದ ಸುಪ್ರೀಮ್ ಕೋರ್ಟ್