Site icon Vistara News

Suryakumar Yadav Catch: ಬೌಂಡರಿ ಲೈನ್ ಟಚ್ ಮಾಡಿದ್ರಾ ಸೂರ್ಯಕುಮಾರ್?; ಹೊಸ ವಿಡಿಯೊ ವೈರಲ್​

Suryakumar Yadav

Suryakumar Yadav Catch: Fresh Video Featuring Suryakumar Yadav's Catch Triggers Debate, Fans Say "Robbed"

ಬಾರ್ಬಾಡೋಸ್​: ಅತ್ಯಂತ ರೋಚಕವಾಗಿ ನಡೆದ ಶನಿವಾರದ ಟಿ20 ವಿಶ್ವಕಪ್​ ಫೈನಲ್(T20 World Cup 2024)​ ಪಂದ್ಯದ ಅಂತಿಮ ಓವರ್​ನಲ್ಲಿ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರು ಬೌಂಡರಿ ಲೈನ್‌ನಲ್ಲಿ ಕೂದಲೆಳೆ(Suryakumar Yadav Catch) ಅಂತರದಲ್ಲಿ ಡೇವಿಡ್ ಮಿಲ್ಲರ್(David Miller) ಅವರ ಆಘಾತಕಾರಿ ಕ್ಯಾಚ್ ಹಿಡಿಯುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈ ಕ್ಯಾಚ್​ ಬಗ್ಗೆ ದಕ್ಷಿಣ ಆಫ್ರಿಕಾದ ಅಭಿಮಾನಿಗಳು ಚಕಾರ ಎತ್ತಿದ್ದಾರೆ.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಮಿಲ್ಲರ್​ ಔಟ್​ ಆಗದೇ ಹೋಗಿದ್ದರೆ ಭಾರತ ಪಂದ್ಯ ಸೋಲುವ ಸಾಧ್ಯತೆ ಇತ್ತು.

ಇದೀಗ ಸೂರ್ಯಕುಮಾರ್​ ಅವರು ಹಿಡಿದ ಕ್ಯಾಚ್​ನ ವಿಡಿಯೊವನ್ನು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ನೆಟ್ಟಿಗರು ಅಂಪೈರ್​ಗಳು ಈ ವಿಡಿಯೊವನ್ನು ಸೂಕ್ಷವಾಗಿ ಗಮನಿಸುವ ಅಗತ್ಯವಿದೆ. ಸೂರ್ಯಕುಮಾರ್​ ಅವರ ಕಾಲುಗಳು ಬೌಂಡರಿ ಲೈನ್​ಗ ಕೆಳ ಭಾಗದ ಪಟ್ಟಿಗೆ ತಾಗಿರುವುದು ಕಂಡು ಬಂದಿದೆ. ಹೀಗಾಗಿ ಇದು ಔಟ್​ ಅಲ್ಲ ಸಿಕ್ಸ್​ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ Rohit Sharma: ಲಿಯೋನೆಲ್ ಮೆಸ್ಸಿ ಶೈಲಿಯಲ್ಲಿ ವಿಶ್ವಕಪ್​ ಎತ್ತಿ ಹಿಡಿದ ರೋಹಿತ್​; ವಿಡಿಯೊ ವೈರಲ್​

ಹೊಸದಾಗಿ ವೈರಲ್​ ಆಗುತ್ತಿರುವ ವಿಡಿಯೊ ನೋಡುವಾಗ ಬೌಂಡರಿ ಲೈನ್​ನ ಕೆಳ ಭಾಗದ ಪಟ್ಟಿ ಸೂರ್ಯಕುಮಾರ್​ ಅವರ ಕಾಲಿಗೆ ತಾಗಿದಂತೆ ಕಾಣುತ್ತದೆ. ಆದರೆ, ನಿನ್ನೆ ಮೂರನೇ ಅಂಪೈರ್ ಹಲವು ಆಯಾಮದಲ್ಲಿ ಪರೀಕ್ಷಿಸುವಾಗ ಇದು ಬೆಳಕಿಗೆ ಬಂದಿರಲಿಲ್ಲ. ಹೀಗಾಗಿ ಈ ಕ್ಯಾಚ್​ನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗಳು ಶರುವಾಗಿದೆ. ಕೆಲವರು ಇದು ಅಂಪೈರ್​ಗಳ ಅನ್ಯಾಯ ಎಂದರೆ, ಇನ್ನು ಕೆಲವರು ಇದು ಎಡಿಟ್​ ಮಾಡಿರುವ ವಿಡಿಯೊ ಎಂದು ಟ್ವೀಟ್​ ವಾರ್​ ನಡೆಸುತ್ತಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ್ದ ಸೂರ್ಯಕುಮಾರ್ ಫೈನಲ್​ ಪಂದ್ಯದಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲರಾದರು. 4 ಎಸೆತ ಎದುರಿಸಿ ಕೇವಲ 3 ರನ್​ಗೆ ವಿಕೆಟ್​ ಕೈಚೆಲ್ಲಿ ನಿರಾಸೆ ಮೂಡಿಸಿದರು. ಆದರೆ, ಫೀಲ್ಡಿಂಗ್​ನಲ್ಲಿ ತೋರಿದ ಉತ್ಕೃಷ್ಟ ಮಟ್ಟದ ಪ್ರದರ್ಶನ ಮಾತ್ರ ಮೆಚ್ಚಲೇ ಬೇಕು.

Exit mobile version