ದುಬೈ: 2022ರ ಸಾಲಿನ ಪುರುಷರ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ(ICC Awards) ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್(Suryakumar Yadav) ಭಾಜನರಾಗಿದ್ದಾರೆ. ಇದರೊಂದಿಗೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹಿರಿಮೆಗೂ ಸೂರ್ಯಕುಮಾರ್ ಪಾತ್ರರಾದರು.
ಸೂರ್ಯಕುಮಾರ್ ಯಾದವ್ ಜತೆ ಈ ರೇಸ್ನಲ್ಲಿ ಟಿ20 ವಿಶ್ವ ಕಪ್ ವಿಜೇತ ಇಂಗ್ಲೆಂಡ್ ತಂಡದ ಸ್ಯಾಮ್ ಕರನ್, ಪಾಕಿಸ್ಥಾನದ ವಿಕೆಟ್‌ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಾಜಾ ನಾಮನಿರ್ದೇಶನಗೊಂಡಿದ್ದರು. ಆದರೆ ಅಂತಿಮವಾಗಿ ಸೂರ್ಯಕುಮಾರ್ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
2022ರ ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್(Suryakumar Yadav) ಟಿ20 ಕ್ರಿಕೆಟ್ನಲ್ಲಿ ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ಅವರು 187.43 ರ ಸ್ಟ್ರೈಕ್ ರೇಟ್‌ನಲ್ಲಿ 1164 ರನ್‌ಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಜತೆಗೆ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಈ ಎಲ್ಲ ಸಾಧನೆಯಿಂದ ಅವರು ಈ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ | ICC Men’s Test Team of the Year: ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ರಿಷಭ್ ಪಂತ್