ಹೈದರಾಬಾದ್: ಇಲ್ಲಿ ಮುಕ್ತಾಯಕಂಡ 76ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ(Swimming Nationals 2023) ಕರ್ನಾಟಕ(Karnataka) ತಂಡ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. 16 ಚಿನ್ನ, 10 ಬೆಳ್ಳಿ, 12 ಕಂಚಿನೊಂದಿಗೆ ಒಟ್ಟು 38 ಪದಕ ಗೆದ್ದ ರಾಜ್ಯ ತಂಡ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ರಾಜ್ಯವು ಪುರುಷರ ವಿಭಾಗದಲ್ಲಿ 135, ಮಹಿಳೆಯರ ವಿಭಾಗದಲ್ಲಿ 156 ಅಂಕಗಳೊಂದಿಗೆ ಒಟ್ಟು 299 ಅಂಕ ಗಳಿಸಿತು.
ಟೂರ್ನಿಯ 4ನೇ ಹಾಗೂ ಅಂತಿಮ ದಿನವಾದ ಬುಧವಾರ ರಾಜ್ಯದ ಮೂವರು ರಾಷ್ಟ್ರೀಯ ದಾಖಲೆಯೊಂದಿಗೆ(National Record) ಚಿನ್ನಕ್ಕೆ ಕೊರಳೊಡಿದ್ದಿದರು. ರಾಜ್ಯವು ಒಟ್ಟು 5 ಚಿನ್ನ, 5 ಬೆಳ್ಳಿ ತನ್ನದಾಗಿಸಿಕೊಂಡಿತು. ಮಹಿಳೆಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ನೀನಾ ವೆಂಕಟೇಶ್, ಮಹಿಳೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಲಿನೈಶಾ, ಮಹಿಳೆಯರ 200 ಮೀ. ಫ್ರೀ ಸ್ಟೈಲ್‌ನಲ್ಲಿ ಧಿನಿಧಿ ದೇಸಿಂಘು ರಾಷ್ಟ್ರೀಯ ದಾಖಲೆ ಬರೆದರು. 8 ಚಿನ್ನದೊಂದಿಗೆ 25 ಪದಕ ಗೆದ್ದ ಮಹಾರಾಷ್ಟ್ರ, 5 ಚಿನ್ನದೊಂದಿಗೆ ಒಟ್ಟು 9 ಪದಕ ಗೆದ್ದ ಗುಜರಾತ್ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆಯಿತು. ಕರ್ನಾಟಕದ ಎ.ಕೆ.ಲಿನೀಶಾ ಹಾಗೂ ಆರ್ಯನ್ ನೆಹ್ರಾ ಕ್ರಮವಾಗಿ ಮಹಿಳಾ ಮತ್ತು ಪುರುಷರ ಶ್ರೇಷ್ಠ ಈಜುಪಟುಗಳು ಎಂಬ ಗೌರವ ಪಡೆದರು.
ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್ ಕವಾಯ್
ದಾಖಲೆ ನಿರ್ಮಿಸಿದ ಧೀನಿಧಿ
200 ಮೀಟರ್ ಫ್ರೀಸ್ಟೈಲ್ ನಲ್ಲಿ ಕರ್ನಾಟಕದ ಧೀನಿಧಿ ದೇಸಿಂಘು(Dhinidhi Desinghu) ಅವರು 2:04.24 ನಿಮಿಷದಲ್ಲೇ ಗುರಿ ತಲುಪಿ ಚಿನ್ನದ ಜತೆಗೆ ರಾಷ್ಟ್ರೀಯ ದಾಖಲೆ ಬರೆದರು. ಈ ಮೂಲಕ 2019ರಲ್ಲಿ ಶಿವಾನಿ ಕಟಾರಿಯಾ ಅವರು ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದರು. ಶಿವಾನಿ 2:05.08ನಿಮಿಷದಲ್ಲಿ ಈ ಸಾಧನೆ ಮಾಡಿದ್ದರು.
ಆರ್ಯನ್ ದಾಖಲೆ
ಗುಜರಾತ್ನ ಆರ್ಯನ್ ನೆಹ್ರಾ(Aryan Nehra) ಅವರು 400 ಮೀಟರ್ ಮಿಡ್ಲೆ ಸ್ಪರ್ಧೆಯಲ್ಲಿ 4:25.62 ನಿಮಿಷದಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆಯನ್ನು ಬರೆದರು. 2009 ರಲ್ಲಿ ಕರ್ನಾಟಕದ ರೆಹಾನ್ ಪೂಂಚಾ (4:30.13) ನಿರ್ಮಿಸಿದ್ದ ದಾಖಲೆ ಪತನಗೊಂಡಿತು.