ಬಾಸೆಲ್ (ಸ್ವಿಜರ್ಲೆಂಡ್): ಸ್ವಿಸ್ ಓಪನ್ ಸೂಪರ್ ಸೀರೀಸ್-300 ಬ್ಯಾಡ್ಮಿಂಟನ್(Swiss Open) ಪಂದ್ಯಾವಳಿಯಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಚಿರಾಗ್ ಶೆಟ್ಟಿ(Chirag Shetty) ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ(Satwiksairaj Rankireddy) ಜೋಡಿ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಭಾನುವಾರ ಇಲ್ಲಿ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವದ 6ನೇ ಶ್ರೇಯಾಂಕದ ಭಾರತೀಯ ಜೋಡಿ ಚೀನಾದ ಟ್ಯಾಂಗ್ ಕಿಯಾನ್ ಮತ್ತು ರೆನ್ ಯು ಕ್ಸಿಯಾಂಗ್ ಜೋಡಿ ವಿರುದ್ಧ 21-19,24-22 ನೇರ ಗೇಮ್ಗಳ ಅಂತರದಿಂದ ಮೇಲುಗೈ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಉಭಯ ಜೋಡಿಗಳ ಈ ಹೋರಾಟ ಕೇವಲ 54 ನಿಮಿಷಕ್ಕೆ ಕೊನೆಗೊಂಡಿತು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟ ಕಾಮನ್ ವೆಲ್ತ್ ಗೇಮ್ಸ್ 2022 ಚಾಂಪಿಯನ್ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಎದುರಾಳಿಗಳಿಗೆ ಪಂದ್ಯದಲ್ಲಿ ಹಿಡಿತ ಸಾಧಿಸುವ ಅವಕಾಶವನ್ನೇ ನೀಡಲಿಲ್ಲ. ದ್ವಿತೀಯ ಗೇಮ್ನ ಅಂತಿಮ ಹಂತದಲ್ಲಿ ಎದುರಾಳಿ ಜೋಡಿ ಒಮ್ಮೆ, ತಿರುಗಿ ಬೀಳುವ ಸೂಚನೆ ನೀಡದರೂ ಎಚ್ಚೆತ್ತುಕೊಂಡ ಭಾರತೀಯ ಜೋಡಿ ಈ ಗೇಮ್ನಲ್ಲಿಯೂ ಗೆಲುವು ಸಾಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರು ವರ್ಷಾರಂಭದಲ್ಲಿ ಮಂಡಿನೋವಿನ ಗಾಯದಿಂದ ಬಳಲುತ್ತಿದ್ದ ಕಾರಣದಿಂದ ಈ ಜೋಡಿ ಪ್ರಮುಖ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ ಕಳೆದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡಿದ್ದ ಈ ಜೋಡಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಇದೀಗ ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಂಡಿರುವ ಸಾತ್ವಿಕ್ ಅವರು ಚಿರಾಗ್ ಜತೆಗೂಡಿ ಮತ್ತೆ ಹಿಂದಿನ ಫಾರ್ಮ್ಗೆ ಮರಳುವ ಮೂಲಕ ಚಿನ್ನ ಗೆದ್ದಿದ್ದಾರೆ.
ಇದನ್ನೂ ಓದಿ India Open 2023 | ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್-ಚಿರಾಗ್ ಜೋಡಿ!
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚಿರಾಗ್-ಸಾತ್ವಿಕ್ ಜೋಡಿ ಮಲೇಷ್ಯಾದ ಓಂಗ್ ವ್ಯೂ ಸಿನ್-ಟೆ ಈ ಯೀ ವಿರುದ್ಧ 21-19,17-21,21-17 ಮೂರು ಗೇಮ್ಗಳ ಮ್ಯಾರಥಾನ್ ಹೋರಾಟದಲ್ಲಿ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆಯಿಟ್ಟಿದ್ದರು.