Site icon Vistara News

Neeraj Chopra: ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ಸ್ವಿಸ್‌ ಪ್ರವಾಸೋದ್ಯಮ ಗೌರವ

Switzerland HONOURS Neeraj Chopra

ಲಾಸನ್ನೆ: ಭಾರತದ ಸ್ಟಾರ್​ ಜಾವೆಲಿನ್‌ ಎಸೆತಗಾರ, ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ(Neeraj Chopra) ಅವರನ್ನು ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸೋದ್ಯಮವು ವಿಶೇಷ ಗೌರವ ನೀಡಿದೆ. ಯುರೋಪ್‌ನ ಉನ್ನತ ಸ್ಥಳವಾದ ಜಂಗ್‌ಫ್ರಾಜೋಸ್‌ನಲ್ಲಿರುವ(Jungfraujoch,) ಪ್ರಖ್ಯಾತ ಐಸ್‌ ಪ್ಯಾಲೇಸ್‌ನಲ್ಲಿ(Ice Palace) ನೀರಜ್​ ಅವರ ಫ‌ಲಕವೊಂದನ್ನು ಸ್ಥಾಪಿಸಿ ಗೌರವಿಸಿದೆ.

ಸ್ವಿಟ್ಜರ್ಲೆಂಡ್‌ ಪ್ರವಾಸೋದ್ಯಮ ರಾಯಭಾರಿಯಾಗಿರುವ ನೀರಜ್‌ ಚೋಪ್ರಾ ಅವರಿಂದಲೇ ಅವರ ಸ್ಮರಣಾರ್ಥ ಸ್ಥಾಪಿಸಿದ ಫ‌ಲಕವನ್ನು ಅನಾವರಣಗೊಳಿಸಲಾಗಿದೆ. ಇದೇ ವೇಳೆ ಪ್ರವಾಸಿಗರ ಆಕರ್ಷಣೆಗಾಗಿ ನೀರಜ್ ತಮ್ಮ ಜಾವೆಲಿನ್‌ ಒಂದನ್ನು ದೇಣಿಗೆಯಾಗಿ ನೀಡಿದರು. ಈ ಜಾವೆಲಿನ್‌ ಅನ್ನು ಫ‌ಲಕದ ಬದಿಯಲ್ಲಿ ಇರಿಸಲಾಗಿದೆ ಎಂದು ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸೋದ್ಯಮ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಒದಿ ಪಿ.ವಿ ಸಿಂಧು-ನೀರಜ್ ಚೋಪ್ರಾ ಮಧ್ಯೆ ಪ್ರೇಮಾಂಕುರ? ಅನುಮಾನ ಹುಟ್ಟಿಸಿದ​ ಪೋಸ್ಟ್​!

ಇತ್ತೀಚೆಗೆ ನೀರಜ್​ ಅವರು ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್(Roger Federer) ಅವರನ್ನು ಸ್ವಿಟ್ಜರ್ಲೆಂಡ್​ನಲ್ಲಿ ಭೇಟಿಯಾಗಿದ್ದರು. ಫೆಡರರ್ ಕೂಡ ಸ್ವಿಟ್ಜರ್ಲೆಂಡ್‌ ಪ್ರವಾಸೋದ್ಯಮ ರಾಯಭಾರಿಯಲ್ಲಿ ಒಬ್ಬರಾಗಿದ್ದಾರೆ. ರೋಜರ್‌ ಫೆಡರರ್‌, ಗಾಲ್ಫ್ ಆಟಗಾರ ರೋರಿ ಮೆಕ್‌ರಾಯ್‌ ಅವರ ಫ‌ಲಕಗಳು ಕೂಡ ಐಸ್‌ ಪ್ಯಾಲೇಸ್‌ನಲ್ಲಿದೆ. ಇದೀಗ ಈ ಸಾಲಿಗೆ ನೀರಜ್‌ ಚೋಪ್ರಾ ಸೇರಿಕೊಂಡಿದ್ದಾರೆ.

ರೋಜರ್ ಫೆಡರರ್ ಅವರನ್ನು ಭೇಟಿಯಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ನೀರಜ್​, “ಟೆನ್ನಿಸ್ ಲೋಕದ ದಂತಕಥೆ ರೋಜರ್‌ ಫೆಡರರ್ ಅವರನ್ನು ಭೇಟಿಯಾಗುವ ಮೂಲಕ ದೀರ್ಘ ಕಾಲದ ನನ್ನ ಕನಸು ನನಸಾಗಿದೆ. ಅವರ ಕೌಶಲ್ಯ, ನಿಜವಾದ ಕ್ರೀಡಾ ಮನೋಭಾವ ಮತ್ತು ಅವರ ಸಾಮರ್ಥ್ಯವನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ” ಎಂದು ಹೇಳಿದ್ದರು.  ಇದೇ ವೇಳೆ ನೀರಜ್​ ಅವರು ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಭಾರತದ ಜೆರ್ಸಿಯನ್ನು ಫೆಡರರ್​ಗೆ ನೀಡಿ ಗೌರವಿಸಿದ್ದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದೇ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಸಿದ್ಧತೆ ಆರಂಭಿಸಿರುವ ನೀರಜ್​ ಇಲ್ಲಿಯೂ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಗೆದ್ದರೆ ಸತತ 2ನೇ ಒಲಿಂಪಿಕ್ಸ್​ ಚಿನ್ನ ಗೆದ್ದ ಸಾಧಕರಾಗಲಿದ್ದಾರೆ. ಸದ್ಯ ಅವರ ಪ್ರದರ್ಶನ ನೋಡುವಾಗ ಚಿನ್ನ ಗೆಲ್ಲುವುದು ಖಚಿತ ಎನ್ನಬಹುದು.

Exit mobile version