Site icon Vistara News

T20 Series | ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವಿಶ್ವ ದಾಖಲೆ ಬರೆಯುತ್ತಾ?

T20 Series: ದಕ್ಷಿಣ ಆಫ್ರಿಕಾ ವಿರುದ್ಧ ಜೂನ್‌ 9ರಿಂದ ಆರಂಭವಾಗಲಿರುವ ಟಿ20 ಸರಣಿ ಭಾರತದ ಮಟ್ಟಿಗೆ ಮಹತ್ವದ್ದಾಗಿದೆ. ಯಾಕೆಂದರೆ, ಇದರಲ್ಲಿ ಭಾರತ ಹೊಸ ದಾಖಲೆಯೊಂದನ್ನು ಬರೆಯಲು ಅವಕಾಶವಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿ ಗೆದ್ದರೆ, ಭಾರತವು ಸತತವಾಗಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಪ್ರಸಕ್ತ ಭಾರತ, ಅಫ್ಘಾನಿಸ್ತಾನ್‌ ಹಾಗೂ ರೊಮಾನಿಯ ತಂಡಗಳು ನಿರಂತರ 12 ಸರಣಿ ಜಯದ ದಾಖಲೆಯನ್ನು ಸಮಾನವಾಗಿ ಹಂಚಿಕೊಂಡಿವೆ. ಈ ಸರಣಿ ಗೆದ್ದರೆ ಭಾರತವು ಎಲ್ಲರನ್ನೂ ಮೀರಿಸಿ ಮೊದಲ ಸ್ಥಾನದಲ್ಲಿರುತ್ತದೆ.

ಭಾರತವು ಕಳೆದ ಬಾರಿ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ್‌ ವಿರುದ್ಧ ಗೆಲುವು ಸಾಧಿಸಿತ್ತು. ಆ ಗೆಲುವಿನಿಂದ ಭಾರತವು ಈ ಹೊಸ ದಾಖಲೆಯತ್ತ ಹೆಜ್ಜೆಯಿಟ್ಟಿದೆ. ಆ ಬಳಿಕ ನ್ಯೂಜಿಲ್ಯಾಂಡ್‌, ವೆಸ್ಟ್‌ ಇಂಡೀಸ್‌ ಹಾಗೂ ಶ್ರೀಲಂಕಾ ವಿರುದ್ಧ ಮೂರು ಮ್ಯಾಚ್‌ಗಳ ಸರಣಿ ಆಡಲಾಗಿತ್ತು. ಭಾರತ ಈ ಎಲ್ಲಾ ಸರಣಿಯಲ್ಲಿ ಗೆಲುವು ಸಾಧಿಸಿತ್ತು. ನವೆಂಬರ್‌ 3, 2021ರಿಂದ ಆರಂಭಗೊಂಡು ಫೆಬ್ರುವರಿ 27, 2022ರವರೆಗೆ ಒಟ್ಟು 12 ಮ್ಯಾಚ್‌ಗಳಲ್ಲಿ ಸತತವಾಗಿ ಭಾರತ ಗೆಲುವು ಸಾಧಿಸಿದೆ.

ಹೀಗೆ ಸತತವಾಗಿ ಗೆಲುವು ಸಾಧಿಸಿದ ತಂಡದಲ್ಲಿ ಅಫ್ಘಾನಿಸ್ತಾನ್‌ ಹಾಗೂ ರೊಮಾನಿಯ ತಂಡವೂ ಇದೆ. ಫೆಬ್ರುವರಿ 2018ರಿಂದ ಸೆಪ್ಟಂಬರ್‌ 2019ರವರೆಗೆ ಆಡಿದ 12 ಪಂದ್ಯಗಳಲ್ಲಿ ಅಫ್ಘಾನಿಸ್ತಾನ್‌ ಗೆದ್ದಿತ್ತು. ಅಲ್ಲದೆ, ಅಕ್ಟೋಬರ್‌ 2020 ರಿಂದ ಸೆಪ್ಟಂಬರ್‌ 2021ರ ಆವಧಿಯಲ್ಲಿ ರೊಮಾನಿಯಾ ಕೂಡ 12 ಪಂದ್ಯಗಳನ್ನು ಗೆದ್ದಿದೆ.

ವಿರಾಟ್‌ ಕೋಹ್ಲಿ ನಾಯಕತ್ವದಲ್ಲಿ ಈ ಗೆಲುವಿನ ರೇಸ್‌ ಶುರುವಾಗಿದ್ದು, ಅದನ್ನು ರೋಹಿತ್‌ ಶರ್ಮಾ ಮುಂದುವರಿಸಿದರು. ಈಗ ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಈ ಗೆಲುವು ಮುಂದುವರಿದು ಹೊಸ ದಾಖಲೆ ಬರೆಯಲು ಭಾರತ ತಂಡ ಸಿದ್ಧವಾಗಿದೆ

ಇದನ್ನೂ ಓದಿ: ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಘೋಷಣೆ

Exit mobile version