Site icon Vistara News

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಅನುಭವಿ ಸ್ಮಿತ್​ಗೆ ಅವಕಾಶವಿಲ್ಲ

australia t20 world cup

ಸಿಡ್ನಿ: ಕ್ರಿಕೆಟ್​ ಆಸ್ಟ್ರೇಲಿಯಾ ಇದೇ ಜೂನ್​ನಲ್ಲಿ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್​ಗೆ(T20 World Cup 2024) ತನ್ನ 15 ಸದಸ್ಯರ ತಂಡವನ್ನು(T20 World Cup Australia squad) ಬುಧವಾರ ಪ್ರಕಟಿಸಿದೆ. ಆದರೆ, ಅನುಭವಿ ಬ್ಯಾಟರ್ ಸ್ಟೀವನ್​ ಸ್ಮಿತ್(Steve Smith) ಮತ್ತು ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ತಂಡದ ಪರ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಂಚಲನ ಸೃಷ್ಟಿಸಿದ್ದ ಯುವ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್​ಗೆ(Jake Fraser-McGurk) ಕೊಕ್​ ನೀಡಲಾಗಿದೆ. ಕಳೆದ ಒಂದು ವರ್ಷಗಳಿಂದ ಆಸ್ಟ್ರೇಲಿಯಾ ಟಿ20 ತಂಡವನ್ನು ಹಂಗಾಮಿಯಾಗಿ ಮುನ್ನಡೆಸುತ್ತಿದ್ದ ಮಿಚೆಲ್​ ಮಾರ್ಷ್​ ತಂಡದ ನಾಯಕನಾಗಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್​, ಗಿಲ್​ಕ್ರಿಸ್ಟ್​, ಮೈಕಲ್​ ಹಸ್ಸಿ, ಮ್ಯಾಥ್ಯೂ ಹೇಡನ್​, ಮೈಕಲ್​ ಕ್ಲಾರ್ಕ್​, ಮೆಗ್ರಾತ್​ ಮತ್ತು ದಿವಂಗತ ಆ್ಯಂಡ್ರ್ಯೂ ಸೈಮಂಡ್ಸ್‌ ಅವರ ಮಕ್ಕಳಿಬ್ಬರು ಆಟಗಾರರ ಕ್ಯಾಪ್​ ಸಂಖ್ಯೆಯನ್ನು ಹೇಳುವ ಮೂಲಕ ಟಿ20ಗೆ ತಂಡವನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ಸೋಮವಾರ ನ್ಯೂಜಿಲ್ಯಾಂಡ್ ತಂಡವನ್ನು​ ಇಬ್ಬರು ಮಕ್ಕಳು ಸುದ್ದಿಗೋಷ್ಠಿ ನಡೆಸಿ ಟಿ20ಗೆ ತಂಡ ಪ್ರಕಟಿಸಿ ಎಲ್ಲರ ಗಮನಸೆಳೆದಿದ್ದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್​ಗೆ ಕೊಕ್​

ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್, ಟಿಮ್‌ ಡೇವಿಡ್ ಅವರನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಗ್ಲೆನ್​ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ತಂಡದ ಸ್ಟಾರ್​ ಆಲ್​ರೌಂಡರ್​ಗಳಾಗಿದ್ದಾರೆ. ಸ್ಪಿನ್ಸ್‌ ಬೌಲರ್​ಗಳಾಗಿ ಆ್ಯಡಂ ಝಂಪಾ ಮತ್ತು ಆ್ಯಶ್ಟನ್​ ಅಗರ್ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಜೂನ್​ 3ರಂದು ಉಗಾಂಡ ವಿರುದ್ಧ ಆಡಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿತ್ತು. ಹೀಗಾಗಿ ಅಂತಿಮ ದಿನದಂದೆ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿತು. ಏಪ್ರಿಲ್​ 30ರಂದು ಹಾಲಿ ಚಾಂಪಿಯನ್​ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ತನ್ನ ತಂಡವನ್ನು ಪ್ರಕಟಿಸಿತ್ತು. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಆ್ಯಶ್ಟನ್​ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.

Exit mobile version