ಬೆಂಗಳೂರು: 2024 ರ ಟಿ 20 ವಿಶ್ವಕಪ್ನಲ್ಲಿ (T20 World Cup 2024) ಇಂಗ್ಲೆಂಡ್ ತಂಡದ ಮಧ್ಯಮ ವೇಗದ ಬೌಲರ್ ಕ್ರಿಸ್ ಜೋರ್ಡಾನ್ ಬೌಲಿಂಗ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಚೆಂಡಿನೊಂದಿಗೆ ರೋಚಕ ಪ್ರದರ್ಶನ ನೀಡಿದ ಅವರು ಯುಎಸ್ಎ ತಂಡ 115 ರನ್ಗಳಿಗೆ ಆಲ್ಔಟ್ ಆಗುವಂತೆ ನೋಡಿಕೊಂಡರು. ಈ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್ ವಿಜಯ ಸಾಧಿಸಿದೆ. ಬಾರ್ಬಡೋಸ್ನ ಬ್ರಿಜ್ಟೌನ್ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಇಂಗ್ಲೆಂಡ್ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಡೆಯಲು ಅವರು 19ನೇ ಓವರ್ನಲ್ಲಿ ಯುಎಸ್ಎ ತಂಡದ ಅಲಿ ಖಾನ್, ನೊಸ್ತುಶ್ ಕೆಂಜಿಗೆ ಮತ್ತು ಸೌರಭ್ ನೇತ್ರವಾಲ್ಕರ್ ಅವರನ್ನು ಔಟ್ ಮಾಡಿದರು.
ಪಂದ್ಯದ ಫಲಿತಾಂಶ ಏನಾಯಿತು?
ಬಾರ್ಬಡೋಸ್: ಟಿ20 ವಿಶ್ವ ಕಪ್ 2024ರ (T20 world Cup 2024) ಬಿ ಗುಂಪಿನ ಸೂಪರ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಯುಎಸ್ಎ ತಂಡ 10 ವಿಕೆಟ್ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಯುಎಸ್ಎ ತಂಡದ ಸೆಮಿಫೈನಲ್ಗೇರುವ ಕಸನು ಕಮರಿದೆ. ಈ ಹಂತದಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದಾಗ್ಯೂ ಮೊಟ್ಟ ಮೊದಲ ಬಾರಿಗೆ ವಿಶ್ವ ಕಪ್ ವೇದಿಕೆ ಪ್ರವೇಶಿಸಿದ್ದ ಯುಎಸ್ಎ ತಂಡ ಸೂಪರ್ 8 ಹಂತಕ್ಕೇರುವ ಮೂಲಕ ಮೂಲಕ ಅವಿಸ್ಮರಣೀಯ ಸಾಧನೆ ಮಾಡಿದೆ. ಅತ್ತ ಇಂಗ್ಲೆಂಡ್ ತಂಡ ಆಡಿರುವ ಮೂರರಲ್ಲಿ 2 ಪಂದ್ಯಗಳನ್ನು ಗೆದ್ದು ಸದ್ಯ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ: IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ
ಇಲ್ಲಿನ ಕೆನ್ಸಿಂಗ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಯುಎಸ್ಎ ಬಳಗ 18.5 ಓವರ್ಗಳಲ್ಲಿ 115 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಇನ್ನೂ 64 ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟವೇ ಇಲ್ಲದೆ 117 ರನ್ ಗಳಿಸಿ ಗೆಲುವು ಸಾಧಿಸಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಲು ಹೊರಟ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್ಗಳಾದ ಜೋಸ್ ಬಟ್ಲರ್ (83) ಹಾಗೂ ಫಿಲ್ ಸಾಲ್ಟ್ (25) ಯುಎಸ್ಎ ಬೌಲರ್ಗಳನ್ನು ಚೆಂಡಾಡಿದರು. ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಆಡಿದ ಈ ಜೋಡಿ ಬಳಿಕ ಏಕಾಏಕಿ ವೇಗ ವೃದ್ಧಿಸಿತು. ಯುಎಸ್ಎ ತಂಡದ ರೂಪಿಸಿದ ಯಾವುದೇ ರಣತಂತ್ರಕ್ಕೆ ಬಗ್ಗದ ಅವರಿಬ್ಬರೂ ನಿರಾಯಾಸವಾಗಿ ಪಂದ್ಯ ಗೆಲ್ಲಿಸಿದರು.