ಬೆಂಗಳೂರು: 9ನೇ ಆವೃತ್ತಿಯ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಬೆರಳೆಣಿಕೆ ದಿನಗಳ ಮಾತ್ರ ಬಾಕಿ ಉಳಿದಿವೆ. ಜೂನ್ 1ರಿಂದ ಆರಂಭವಾಗಿ 29ರ ತನಕ ಪಂದ್ಯಾವಳಿಗಳು ಸಾಗಲಿದೆ. ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಾಡ ಮುಖಾಮುಖಿಯಾಗಲಿವೆ. ಇದುವರೆಗಿನ 8 ಆವೃತ್ತಿಯ ಮಿನಿ ವಿಶ್ವಕಪ್ ಸಮರದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳು ಯಾರೆಂಬ ಕುತೂಹಲಕಾರಿ ಮಾಹಿತಿ ಇಂತಿದೆ.
ಶಕೀಬ್ ಅಲ್ ಹಸನ್
ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಶಕೀಬ್ ಅಲ್ ಹಸನ್(Shakib Al Hasan) ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದಾರೆ. ಜತೆಗೆ ಉದ್ಘಾಟನ ಆವೃತ್ತಿಯಿಂದ ಇದುವರೆಗಿನ ಎಲ್ಲ ಆವೃತ್ತಿಯಲ್ಲಿಯೂ ಆಡಿದ ಆಟಗಾರನೂ ಆಗಿದ್ದಾರೆ. ಒಟ್ಟು 36 ಪಂದ್ಯಗಳನ್ನಾಡಿ 47 ವಿಕೆಟ್ ಕೆಡವಿದ್ದಾರೆ. ಈ ಬಾರಿ ಮೂರು ವಿಕೆಟ್ ಕಿತ್ತರೆ 50 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ. 9 ರನ್ಗೆ 4 ವಿಕೆಟ್ ಕಿತ್ತದ್ದು ಅವರ ವೈಯಕ್ತಿಕ ಸಾಧನೆಯಾಗಿದೆ.
ಶಾಹೀದ್ ಅಫ್ರಿದಿ
ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿಗೆ(Shahid Afridi) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳ ಯಾದಿಯಲ್ಲಿ ದ್ವಿತೀಯ ಸ್ಥಾನ. 2007 ರಿಂದ 2016ರ ತನಕ ಒಟ್ಟು 34 ಪಂದ್ಯಗಳನ್ನಾಡಿರುವ ಅಫ್ರಿದಿ 39 ವಿಕೆಟ್ ಉರುಳಿಸಿದ್ದಾರೆ. 11 ರನ್ಗೆ 4 ವಿಕೆಟ್ ಪಡೆದದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಲಸಿತ್ ಮಾಲಿಂಗ
ಶ್ರೀಲಂಕಾ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ(Lasith Malinga) 2007 ರಿಂದ 2014ರ ತನಕ ಒಟ್ಟು 31 ಟಿ20 ವಿಶ್ವಕಪ್ ಪಂದ್ಯಗಳನ್ನಾಡಿ 38 ವಿಕೆಟ್ ಪಡೆದಿದ್ದಾರೆ. 31 ರನ್ಗೆ 5 ವಿಕೆಟ್ ಉರುಳಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಮೂರನೇ ಅಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ T20 World Cup 2024: 2ನೇ ಬ್ಯಾಚ್ನಲ್ಲಿ ನ್ಯೂಯಾರ್ಕ್ಗೆ ತೆರಳಿದ ಭಾರತದ ಮೂವರು ಆಟಗಾರರು
ಸಯೀದ್ ಅಜ್ಮಲ್
ಪಾಕಿಸ್ತಾನ ತಂಡದ ಮಾಜಿ ಸ್ಪಿನ್ ಬೌಲರ್ ಸಯೀದ್ ಅಜ್ಮಲ್(Saeed Ajmal) ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2009 ರಿಂದ 2014ರ ತನಕ 23 ಪಂದ್ಯಗಳನ್ನು ಆಡಿದ ಅವರು 36 ವಿಕೆಟ್ ಕಡೆವಿದ್ದಾರೆ.
ಅಜಂತಾ ಮೆಂಡೀಸ್
ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್ ಅಜಂತಾ ಮೆಂಡೀಸ್(Ajantha Mendis) 2009 ರಿಂದ 2014 ತನಕ ಒಟ್ಟು 21 ಪಂದ್ಯಗಳನ್ನಾಡಿ 35 ವಿಕೆಟ್ ಕಿತ್ತಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಟಿ20 ಆಡುತ್ತಿರುವ ನ್ಯೂಜಿಲ್ಯಾಂಡ್ ತಂಡದ ಹಿರಿಯ ವೇಗಿ ಟಿಮ್ ಸೌಥಿ 7 ವಿಕೆಟ್ ಕಿತ್ತರೆ ಮೆಂಡೀಸ್ ದಾಖಲೆ ಪತನಗೊಳ್ಳಲಿದೆ. ಸದ್ಯ ಸೌಥಿ 29* ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತದ ಬ್ಯಾಟರ್ಗಳಿವರು