ಬೆಂಗಳೂರು: ಟಿ20 ವಿಶ್ವಕಪ್ ಟೂರ್ನಿ(T20 World Cup 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಶನಿವಾರ(ಜೂನ್ 1)ದಿಂದ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಆತಿಥೇಯ ಅಮೆರಿಕ ಮತ್ತು ಕೆನಡಾ ತಂಡಗಳು ಉದ್ಘಾಟನ ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಕಳೆದ 8 ಆವೃತ್ತಿಯ ಟೂರ್ನಿಯಲ್ಲಿ(t20 world cup history) ಎಷ್ಟು ಬೌಲರ್ಗಳು ಹ್ಯಾಟ್ರಿಕ್ ವಿಕೆಟ್(Hat-tricks in Men’s T20 World Cup) ಪಡೆದಿದ್ದಾರೆ ಎಂಬ ಕುತೂಹಲಕಾರಿ ವರದಿ ಇಂತಿದೆ.
ಬ್ರೆಟ್ ಲೀ
ಆಸ್ಟ್ರೇಲಿಯಾದ ಘಾತಕ ಮಾಜಿ ವೇಗಿ ಬ್ರೆಟ್ ಲೀ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್. ಈ ಸಾಧನೆಯನ್ನು ಅವರು 2007 ಉದ್ಘಾಟನ ಆವೃತ್ತಿಯಲ್ಲೇ ನಿರ್ಮಿಸಿದ್ದು ವಿಶೇಷ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್, ಮಶ್ರಫೆ ಮೊರ್ತಜಾ, ಅಲೋಕ್ ಕಪಾಲಿ ವಿಕೆಟ್ ಕೀಳುವ ಮೂಲಕ ಈ ದಾಖಲೆ ಬರೆದಿದ್ದರು.
ಕರ್ಟಿಸ್ ಕ್ಯಾಂಪರ್
ಬ್ರೆಟ್ ಲೀ ಬಳಿಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ದಾಖಲಾದದ್ದು 2021ರಲ್ಲಿ. ಐರ್ಲೆಂಡ್ನ ಕರ್ಟಿಸ್ ಕ್ಯಾಂಪರ್ ಈ ದಾಖಲೆ ಮಾಡಿದ ಬೌಲರ್. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕರ್ಟಿಸ್ ಕ್ಯಾಂಪರ್ ಸತತವಾಗಿ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದರು. ಇವರ ಬೌಲಿಂಗ್ ದಾಳಿಗೆ ವಿಕೆಟ್ ಕಳೆದುಕೊಂಡ ಬ್ಯಾಟರ್ಗಳೆಂದರೆ, ಕಾಲಿನ್ ಅಕರ್ಮನ್, ರಿಯಾನ್ ಟೆನ್ ಡೋಸ್ಚೇಟ್, ಸ್ಕಾಟ್ ಎಡ್ವರ್ಡ್ಸ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ.
ವನಿಂದು ಹಸರಂಗ
ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಬೌಲರ್ಗಳ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹಸರಂಗ 2021ರಲ್ಲಿ ನಡೆದಿದ್ದ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ, ಡ್ವೈನ್ ಪ್ರಿಟೋರಿಯಸ್ ವಿಕೆಟ್ ಕೀಳುವ ಮೂಲಕ ಈ ದಾಖಲೆ ಬರೆದರು.
ಕಗಿಸೊ ರಬಾಡ
ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಕೂಡ 2021ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಇಂಗ್ಲೆಂಡ್ ತಂಡದ ಕ್ರಿಸ್ ವೋಕ್ಸ್, ಇಯಾನ್ ಮೋರ್ಗನ್, ಕ್ರಿಸ್ ಜೋರ್ಡಾನ್ ವಿಕೆಟ್ ಕೀಳುವ ಮೂಲಕ ಈ ಸಾಧನೆ ತೋರಿದ್ದರು.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತದ ಬ್ಯಾಟರ್ಗಳಿವರು
ಕಾರ್ತಿಕ್ ಮೇಯಪ್ಪನ್
ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಟಿ20 ವಿಶ್ವ ಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ 5ನೇ ಬೌಲರ್ ಎನಿಸಿಕೊಂಡಿದ್ದಾರೆ. 2022ರಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಅರ್ಹತಾ ಪಂದ್ಯದಲ್ಲಿ ಕಾರ್ತಿಕ್ ಈ ಸಾಧನೆ ಮಾಡಿದ್ದರು. ಭಾನುಕ ರಾಜಪಕ್ಸೆ, ಚರಿತ್ ಅಸಲಂಕಾ, ದಸುನ್ ಶನಕ ವಿಕೆಟ್ ಕಿತ್ತಿದ್ದರು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಯುಎಇ ಆಟಗಾರ ಎನಿಸಿಕೊಂಡರು.
ಜೋಶ್ ಲಿಟಲ್
ಐರ್ಲೆಂಡ್ ತಂಡದ ಜೋಶ್ ಲಿಟಲ್ ಟಿ20 ವಿಶ್ವ ಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಶ್ವದ 6ನೇ ಬೌಲರ್ ಎನಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. 2022ರ ಆವೃತ್ತಿ ಇದಾಗಿತ್ತು. ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ ವಿಕೆಟ್ ಒಪ್ಪಿಸಿದ ಬ್ಯಾಟರ್ಗಳು.
ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಂಡಿಗರಿವರು!