ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ(T20 World Cup 2024) ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್ 9ರಂದು ನ್ಯೂಯಾರ್ಕ್ನಲ್ಲಿ ಪರಸ್ಪರ ಮುಖಾಮುಖಿ ಆಗಲಿವೆ ಎಂದು ವರದಿಯಾಗಿದೆ.
ಮುಂದಿನ ವಾರಾಂತ್ಯದೊಳಗೆ ಟಿ20 ವಿಶ್ವಕಪ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಭಾರತ ಮತ್ತು ಪಾಕ್ ಪಂದ್ಯ ಯಾವಾಗ ನಡೆಯಲಿದೆ ಎನ್ನುವ ಪ್ರಾಥಮಿಕ ಮೂಲದ ಮಾಹಿತಿಯೊಂದು ದೊರಕಿದೆ. ಜೂನ್ 9ರಂದು ನ್ಯೂಯಾರ್ಕ್ನಲ್ಲಿ ಭಾರತ ಮತ್ತು ಪಾಕ್ ಪಂದ್ಯ ನಡೆಯಲಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇತ್ತಂಡಗಳ ಪಂದ್ಯಕ್ಕಾಗಿ ನ್ಯೂಯಾರ್ಕ್ನಲ್ಲಿ ವಿಶೇಷ ಆಸನ ವ್ಯವಸ್ಥೆಯ ಸ್ಟೇಡಿಯಂ ನಿರ್ಮಿಸಲಾಗಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ T20 World Cup: ಭಾರತ-ಪಾಕ್ ಮುಂದಿನ ವರ್ಷದ ಟಿ20 ವಿಶ್ವ ಕದನಕ್ಕೆ ವೇದಿಕೆ ಸಿದ್ಧ!
ಹಗಲು ಪಂದ್ಯ
ಭಾರತ ಮತ್ತು ಅಮೆರಿಕ ನಡುವಿನ ಸಮಯದ ವ್ಯತ್ಯಾಸದಿಂದಾಗಿ ಇತ್ತಂಡಗಳ ಪಂದ್ಯವನ್ನು ಹಗಲಿನಲ್ಲಿ ನಡೆಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಈ ಪಂದ್ಯದವನ್ನು ಭಾನುವಾರವೇ ನಿಗದಿ ಮಾಡಲಾಗಿದೆ ಎಂದು ವರದಿಯಾಗಿದೆ. ಜೂನ್ 9 ಕೂಡ ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ. ಇದರಿಂದ ಪಂದ್ಯವನ್ನು ಹೆಚ್ಚು ಜನ ವೀಕ್ಷಿಸಲು ಮತ್ತು ಟಿವಿ ಜಾಹಿರಾತು ಪಡೆಯಲು ಸಾಧ್ಯ ಇದೇ ಉದ್ದೇಶಕ್ಕೆ ಬಿಸಿಸಿಐ ಮತ್ತು ಐಸಿಸಿ ಭಾರತ ಮತ್ತು ಪಾಕ್ ಪಂದ್ಯವನ್ನು ಅಮೆರಿಕದಲ್ಲಿ ಹಗಲಿನಲ್ಲಿ ಆಡಿಸಲು ಯೋಜನೆ ರೂಪಿಸಿದೆ.
ಭಾರತ ಮತ್ತು ಪಾಕ್ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂಬುದು ತಿಳಿದುಬಂದಿದೆ.
INDIA VS PAKISTAN WILL BE PLAYED IN NEW YORK CITY IN THE 2024 T20 WORLD CUP….!!! (The Guardian). pic.twitter.com/RbqrkYD2lj
— Mufaddal Vohra (@mufaddal_vohra) December 15, 2023
ಟಿ20 ಮುಖಾಮುಖಿ
ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್ ಅಂತರದ ಹೀನಾಯ ಸೋಲಾಗಿತ್ತು.
ಇದನ್ನೂ ಓದಿ Most ODI wins: ಆಸ್ಟ್ರೇಲಿಯಾದ ದಾಖಲೆ ಮುರಿದ ಟೀಮ್ ಇಂಡಿಯಾ
ಭಾರತ ತಂಡದ ಬಹುತೇಕ ಎಲ್ಲ ಪಂದ್ಯಗಳು ಅಮೆರಿಕದಲ್ಲೇ ನಡೆಯುವ ಸಾಧ್ಯತೆಗಳಿವೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಟಿ20 ಕ್ರಿಕೆಟ್ ಸೇರ್ಪಡೆಯಾಗಿರುವುದರಿಂದ ಅಮೆರಿಕದಲ್ಲಿ ಈಗಿನಿಂದಲೇ ಇದನ್ನು ಜನಪ್ರಿಯಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
20 ತಂಡಗಳು
ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಸಲಾಗಿದೆ. ತಂಡಗಳು ತಲಾ 5ರಂತೆ 4 ಗುಂಪುಗಳಾಗಿ ವಿಭಜನೆ ಮಾಡಲಾಗುತ್ತದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್-8 ಹಂತಕ್ಕೇರಲಿವೆ. ಇಲ್ಲಿ ಮತ್ತೆ ರೌಂಡ್ ರಾಬಿನ್ ಮಾದರಿ ಪಂದ್ಯ ನಡೆದ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್ಗೇರಲಿವೆ.