ಬೆಂಗಳೂರು: 2007ರಲ್ಲಿ ಆರಂಭಗೊಂಡ ಟಿ20 ವಿಶ್ವ ಕಪ್ (T20 World Cup 2024) ನಿಂದ 2022ರ ವಿಶ್ವ ಕಪ್ವರೆಗೆ ನಡೆದ ಟಿ20 ವಿಶ್ವ ಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಎಷ್ಟು ಸಿಕ್ಸರ್ ಸಾಧನೆ ಮಾಡಿದ್ದಾರೆ ಎನ್ನುವ ಸ್ವಾರಸ್ಯಕರ ಸಂಗತಿ ಇಂತಿದೆ.
ರೋಹಿತ್ ಶರ್ಮ
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಉದ್ಘಾಟನ ಆವೃತ್ತಿಯ ವಿಶ್ವಕಪ್ನಿಂದ ಆಡಿ ಇದುವರೆಗೆ 35 ಸಿಕ್ಸರ್ ಬಾರಿಸಿದ್ದಾರೆ. ಇದೀಗ 2024 ರ ವಿಶ್ವ ಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ತಮ್ಮ ಸಿಕ್ಸರ್ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. 2007-2022ರ ವಿಶ್ವಕಪ್ ಆವೃತ್ತಿಯಲ್ಲಿ ರೋಹಿತ್ ಒಟ್ಟು 39 ಪಂದ್ಯಗಳನ್ನು ಆಡಿದ್ದಾರೆ.
ಯುವರಾಜ್ ಸಿಂಗ್
ಭಾರತ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಆಲ್ರೌಂಡರ್, ಮಾಜಿ ಆಟಗಾರ, 2007 ವಿಶ್ವಕಪ್ ಟೂರ್ನಿಯಲ್ಲಿ ಸ್ಟುವರ್ಟ್ ಬ್ರಾಡ್ ಓವರ್ಗೆ ಸತತವಾಗಿ 6 ಸಿಕ್ಸರ್ ಬಾರಿಸಿದ ಯುವರಾಜ್ ಸಿಂಗ್ ಈ ಸಾಲಿನಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಯುವಿ ಒಟ್ಟು 31 ವಿಶ್ವ ಕಪ್ ಪಂದ್ಯಗಳನ್ನು ಆಡಿದ್ದು 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಭಾರತ 2007 ಮತ್ತು 2011 ರ ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಎನ್ನುವ ಕೀರ್ತಿಯೂ ಇವರದ್ದಾಗಿದೆ.
ವಿರಾಟ್ ಕೊಹ್ಲಿ
ಕಳೆದ 2 ವರ್ಷಗಳ ಬಳಿಕ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ, ಈ ಆವೃತ್ತಿ ಐಪಿಎಲ್ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2012ರಿಂದ ಟಿ20 ವಿಶ್ವಕಪ್ ಆಡುತ್ತಿರುವ ಕೊಹ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 28 ಸಿಕ್ಸರ್ ಬಾರಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೇವಲ 4 ಸಿಕ್ಸರ್ ಬಾರಿಸಿದರೆ ಯುವರಾಜ್ ಸಿಂಗ್ ದಾಖಲೆ ಮುರಿಯಲಿದ್ದಾರೆ.
ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಂಡಿಗರಿವರು!
ಎಂ.ಎಸ್ ಧೋನಿ
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಧೋನಿ 2007ರಿಂದ 2016ರ ತನಕ 33 ಪಂದ್ಯಗಳನ್ನಾಡಿ ಒಟ್ಟು 16 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆದರೆ ಧೋನಿ ಚೊಚ್ಚಲ ಟಿ20 ವಿಶ್ವಕಪ್ನಲ್ಲಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಖ್ಯಾತಿ ಹೊಂದಿದ್ದಾರೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು
ಕೆ.ಎಲ್ ರಾಹುಲ್
ಕನ್ನಡಿಗ ಕೆ.ಎಲ್ ರಾಹುಲ್ ಅವರು ಇದುವರೆಗೆ 11 ಟಿ20 ವಿಶ್ವಕಪ್ ಆಡಿದ್ದು 15 ಸಿಕ್ಸರ್ ಬಾರಿಸಿದ್ದಾರೆ. ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅವರಿಗೆ 5ನೇ ಸ್ಥಾನ. ವಿಪರ್ಯಾಸವೆಂದರೆ ಈ ಬಾರಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.