Site icon Vistara News

T20 World Cup 2024: ಸಂಭ್ರಮಾಚರಣೆ ವೇಳೆ ದುರಂತ: ಧ್ವಜ ಹಾರಿಸಲು ಹೋಗಿ ಬಿದ್ದ ಅಭಿಮಾನಿ; ವೈರಲ್‌ ವಿಡಿಯೊ ಇಲ್ಲಿದೆ

T20 World Cup 2024

T20 World Cup 2024

ಲಂಡನ್‌: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಟಿ20 ವಿಶ್ವಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ವಿಶ್ವಾದ್ಯಂತ ಭಾರತ ತಂಡದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿಯೂ ಭಾರತೀಯರ ಸಡಗರ ಮುಗಿಲು ಮುಟ್ಟಿದ್ದು, ಸಾವಿರಾರು ಮಂದಿ ಜಮಾಯಿಸಿ ಸಂತಸ ಹಂಚಿಕೊಂಡಿದ್ದಾರೆ. ಸಂಭ್ರಮಾಚರಣೆ ಮಧ್ಯೆ ಲಂಡನ್‌ಲ್ಲಿ ಅನಾಹುತವೊಂದು ಜರುಗಿದ್ದು, ಕ್ವೀನ್ಸ್ಬರಿ ಟ್ಯೂಬ್ ನಿಲ್ದಾಣ (Queensbury tube station)ದ ಹೊರಗಿನ ಕಂಬದ ಮೇಲೆ ಭಾರತೀಯ ಧ್ವಜವನ್ನು ಹಾರಿಸಲು ಪ್ರಯತ್ನಿಸುತ್ತಿದ್ದಾಗ ಅಭಿಮಾನಿಯೊಬ್ಬರು ನೆಲಕ್ಕೆ ಬಿದ್ದು ಬಿಟ್ಟಿದ್ದಾರೆ. ಸದ್ಯ ಅವರು ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ (Viral Video).

ಧ್ವಜ ಕಟ್ಟಲು ಕಂಬ ಏರಿದ ಅಭಿಮಾನಿ ಕೈ ಜಾರಿ ನೆಲಕ್ಕೆ ಬೀಳುವುದು ವಿಡಿಯೊದಲ್ಲಿ ಕಂಡು ಬಂದಿದೆ. ಅವರ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಳಿಕ ಎದ್ದ ಓಡಾಡಿದ್ದಾರೆ. ಆ ಮೂಲಕ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ.

ನಗರದ ಈಲಿಂಗ್ ರಸ್ತೆಯ ಮತ್ತೊಂದು ಭಾಗದಲ್ಲಿಯೂ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಈ ವೇಳೆ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಬಂಧನಕ್ಕೆ ಕಾರಣ ತಿಳಿದಿಲ್ಲ. ಇತ್ತ ಹ್ಯಾರೋದಲ್ಲಿ ಅಭಿಮಾನಿಗಳು ಪಟಾಕಿಗಳು ಸಿಡಿಸಿ ಸಂತಸ ಹಂಚಿಕೊಂಡಿದ್ದಾರೆ.

ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಭಾರತವು 17 ವರ್ಷಗಳ ನಂತರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ನಿರ್ಣಾಯಕ ಮೂರು ವಿಕೆಟ್‌ಗಳು ಭಾರತವು ಎರಡನೇ ಐಸಿಸಿ ಟಿ20 ವಿಶ್ವಕಪ್‌ ಗೆಲ್ಲಲು ನೆರವಾಯಿತು. ಈ ಗೆಲುವಿನ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

ಬಹುಮಾನದ ಮೊತ್ತ

ಭಾರತ ತಂಡಕ್ಕೆ ಭಾರಿ ಮೊತ್ತದ ಬಹುಮಾನ ಲಭಿಸಿದೆ. $ 2.45 ಮಿಲಿಯನ್ ಯುಎಸ್‌ಡಿ (20,42,49,000 ರೂ.) ಪಡೆದಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ. ರನ್ನರ್​ ಅಪ್​ ದಕ್ಷಿಣ ಆಫ್ರಿಕಾ ತಂಡಕ್ಕೆ 1,280,000 ಯುಎಸ್‌ಡಿ (10,68,06,400 ರೂ.) ಲಭಿಸಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ 11.25 ಮಿಲಿಯನ್ ಯುಸ್ ಡಾಲರ್ ಆಗಿತ್ತು.

ಟೀಮ್​ ಇಂಡಿಯಾಕ್ಕೆ ಧನ್ಯವಾದ ತಿಳಿಸಿದ ಧೋನಿ

ಟೀಮ್​ ಇಂಡಿಯಾಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಕೊಟ್ಟ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶೇಷವಾಗಿ ಶುಭ ಹಾರೈಸಿದ್ದಾರೆ. ನನ್ನ ಹುಟ್ಟು ಹಬ್ಬಕ್ಕೆ ಮುಂಚಿತವಾಗಿಯೇ ಸ್ಮರಣೀಯ ಉಡುಗೊರೆ ನೀಡಿದ್ದಕ್ಕೆ ಟೀಮ್​ ಇಂಡಿಯಾಕ್ಕೆ ಧನ್ಯವಾದಗಳು ಎಂದು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಚಾಂಪಿಯನ್​ ತಂಡದ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ಧೋನಿ, ನನ್ನ ಎದೆ ಬಡಿತ ಹೆಚ್ಚಾಗಿತ್ತು. ಆದರೆ ದೃಢ ನಂಬಿಕೆಯೊಂದಿಗೆ ನೀವೆಲ್ಲರೂ ಉತ್ತಮವಾಗಿ ಆಡಿದ್ದೀರಿ. ತವರಿನ ಮತ್ತು ವಿಶ್ವದೆಲ್ಲಡೆ ಇರುವ ಎಲ್ಲಾ ಭಾರತೀಯರಿಂದ, ವಿಶ್ವಕಪ್ ಮರಳಿ ಮನೆಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅಭಿನಂದನೆಗಳು. ಜತೆಗೆ ನನ್ನ ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು” ಎಂದು ಧೋನಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: T20 World Cup final: ತ್ರಿವರ್ಣ ಧ್ವಜ ಹಿಡಿದು ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ

Exit mobile version