ಬೆಂಗಳೂರು: 2007ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಸಚಿನ್ ತೆಂಡೂಲ್ಕರ್ ಸೇರಿದಂತೆ ಕೆಲವು ಹಿರಿಯ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಮೆನ್ ಇನ್ ಬ್ಲೂ ಅನನುಭವಿ ತಂಡವಾಗಿತ್ತು. ಅದೇ ರೀತಿ ಧೋನಿಗೂ ಹೊಸ ಅನುಭವಾಗಿತ್ತು. ಅಲ್ಲದೆ ಟೂರ್ನಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದ ಭಾರತ ತಂಡಕ್ಕೆ ಕೋಚ್ ಕೂಡ ಇರಲಿಲ್ಲ. ಲಾಲ್ ಚಂದ್ ರಜಪೂತ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದು. ಆದರೂ ಭಾರತ ತಂಡ ಕಪ್ ಗೆದ್ದಿತ್ತು. ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಫೈನಲ್ ನಲ್ಲಿ ಪಾಕಿಸ್ತಾನವನ್ನು ಐದು ರನ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಭಾರತವು ತನ್ನ ಎರಡನೇ ಪ್ರಶಸ್ತಿಯನ್ನು ಗೆಲ್ಲಲು ತಯಾರಿ ನಡೆಸುತ್ತಿತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಆಡಿದ ಭಾರತ ತಂಡದ ಆಟಗಾರರ ಪ್ರದರ್ಶನ ಮತ್ತು ಅವರು ಈಗ ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸೋಣ.
ಪಿಯೂಷ್ ಚಾವ್ಲಾ
2007 ರ ಟಿ 20 ವಿಶ್ವಕಪ್ ನಿಯೋಗದಲ್ಲಿದ್ದು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದ ಏಕೈಕ ಆಟಗಾರ ಲೆಗ್-ಸ್ಪಿನ್ನರ್ ಪಿಯೂಷ್ ಚಾವ್ಲಾ. ಚಾವ್ಲಾ 2011 ರಲ್ಲಿ ಭಾರತದ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಆದರೆ ಕೇವಲ ಮೂರು ಪಂದ್ಯಗಳನ್ನು ಆಡಿದ್ದರು. 35ರ ಹರೆಯದ ಚಾವ್ಲಾ ವೃತ್ತಿಪರ ಕ್ರಿಕೆಟ್ನಲ್ಲಿದ್ದಾರೆ. ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 11 ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 13 ವಿಕೆಟ್ ಪಡೆದಿದ್ದಾರೆ.
ಅಜಿತ್ ಅಗರ್ಕರ್
ಅಗರ್ಕರ್ ಭಾರತೀಯ ತಂಡದಲ್ಲಿದ್ದ ಅತ್ಯಂತ ಅನುಭವಿ ವೇಗಿಯಾಗಿದ್ದರು. ಆದಾಗ್ಯೂ, ಅವರು ಕೇವಲ ಒಂದೆರಡು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದರು ಮತ್ತು ಪಾಕಿಸ್ತಾನ ವಿರುದ್ಧ ಕೇವಲ ಒಂದು ವಿಕೆಟ್ ಪಡೆದಿದ್ದರು. ಮುಂಬೈ ಕ್ರಿಕೆಟಿಗ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯ ಆಯ್ಕೆಗಾರರಾಗಿದ್ದಾರೆ.
ಯೂಸುಫ್ ಪಠಾಣ್
ವಿನಾಶಕಾರಿ ಬಲಗೈ ಬ್ಯಾಟರ್ ಯೂಸುಫ್ ಪಠಾಣ್ ಪಾಕಿಸ್ತಾನ ವಿರುದ್ಧದ ಫೈನಲ್ನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಪಂದ್ಯದ ವೇಳೆ ಗಾಯಗೊಂಡ ವೀರೇಂದ್ರ ಸೆಹ್ವಾಗ್ ಬದಲಿಗೆ ಆಡಿದ ಅವರು ಎಂಟು ಎಸೆತಗಳಲ್ಲಿ 15 ರನ್ ಗಳಿಸಿದರು. ಫೆಬ್ರವರಿ 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಯೂಸುಫ್ ಈ ವರ್ಷದ ಆರಂಭದಲ್ಲಿ ರಾಜಕೀಯಕ್ಕೆ ಕಾಲಿಟ್ಟದ್ದು, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬೆರ್ಹಾಂಪೋರ್ ಸ್ಥಾನದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಇದನ್ನೂ ಓದಿ: T20 World Cup 2024: ಐನಾಕ್ಸ್ ದೈತ್ಯ ಪರದೆಯಲ್ಲೂ ಮೂಡಿಬರಲಿದೆ ಭಾರತದ ಪಂದ್ಯಗಳು
ದಿನೇಶ್ ಕಾರ್ತಿಕ್
ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸುತ್ತಿದ್ದ ಕಾರಣ ದಿನೇಶ್ ಕಾರ್ತಿಕ್ ಪಂದ್ಯಾವಳಿಯ ಮೊದಲಾರ್ಧದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದರು. ಸ್ಪರ್ಧೆಯಲ್ಲಿ ಅವರ ಅತ್ಯಂತ ಸ್ಮರಣೀಯ ಕ್ಷಣವು ದಕ್ಷಿಣ ಆಫ್ರಿಕಾ ವಿರುದ್ಧ ಮೂಡಿ ಬಂತು ಅಲ್ಲಿ ಅವರು ಗ್ರೇಮ್ ಸ್ಮಿತ್ ಅವರನ್ನು ಔಟ್ ಮಾಡಲು ಅದ್ಭುತ ಡೈವಿಂಗ್ ಕ್ಯಾಚ್ ಪಡೆದಿದ್ದರು. ಇದು ಕ್ಯಾಚ್ ಆಫ್ದಿ ಟೂರ್ನಮೆಂಟ್ ಆಯಿತು. ಐಪಿಎಲ್ 2024 ರಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದು ಅವರಿಗದು ಕೊನೇ ಸೀಸನ್. ಆದಾಗ್ಯೂ, ತಮಿಳುನಾಡು ಕ್ರಿಕೆಟಿಗ ಇನ್ನೂ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ. ಆದರೆ, ಕಾಮೆಂಟರಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಎಸ್ ಶ್ರೀಶಾಂತ್
ಎಸ್ ಶ್ರೀಶಾಂತ್ ಈ ವಿಶ್ವ ಕಪ್ನ ಏಳು ಪಂದ್ಯಗಳನ್ನು ಆಡಿದ್ದಾರೆ. 30.50 ಸರಾಸರಿ ಮತ್ತು 23 ಸ್ಟ್ರೈಕ್ ರೇಟ್ನಲ್ಲಿ ಆರು ವಿಕೆಟ್ ಪಡೆದಿದ್ದಾರೆ. ಕೇರಳದ ವೇಗದ ಬೌಲರ್ ಫೈನಲ್ನಲ್ಲಿ ಕೊನೆಯ ಓವರ್ನಲ್ಲಿ ಮಿಸ್ಬಾ-ಉಲ್-ಹಕ್ ಅವರ ಪ್ರಮುಖ ಕ್ಯಾಚ್ ಪಡೆದು ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದ್ದರು. 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಶ್ರೀಶಾಂತ್ ಆಜೀವ ನಿಷೇಧ ಎದುರಿಸಬೇಕಾಯಿತು. ನಂತರ ನಿಷೇಧವನ್ನು ಏಳು ವರ್ಷಗಳಿಗೆ ಇಳಿಸಲಾಯಿತು. ಹೀಗಾಗಿ ಅವರ ಕಕ್ರಿಕೆಟ್ ವೃತ್ತಿ ಜೀವನ ಕಮರಿ ಹೋಯಿತು. ಅವರು 2021 ರಲ್ಲಿ ದೇಶೀಯ ಕ್ರಿಕೆಟ್ಗೆ ಮರಳಿದರು ಮತ್ತು ಮುಂದಿನ ವರ್ಷ ನಿವೃತ್ತರಾದರು. ಇತ್ತೀಚೆಗೆ ಅವರು ವೀಕ್ಷಕ ವಿವರಣೆಗಾರ ಮತ್ತು ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ಜೋಗಿಂದರ್ ಶರ್ಮಾ
ಬಲಗೈ ವೇಗಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟವರು. ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಒತ್ತಡದ ಕೊನೆಯ ಓವರ್ ಎಸೆದಿದ್ದರು. ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದು ಮಿಂಚಿದ್ದರು. ಜೋಗಿಂದರ್ ಹರಿಯಾಣ ಪೊಲೀಸ್ ಇಲಾಖೆಗೆ ಸೇರಿದ್ದಾರೆ ಪ್ರಸ್ತುತ ಅಂಬಾಲಾದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ.
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ ಎಲ್ಲಾ ಏಳು ಪಂದ್ಯಗಳನ್ನು ಆಡಿದ್ದಾರೆ. ಆರು ಇನ್ನಿಂಗ್ಸ್ಗಳಲಲ್ಲಿ 18.83 ಸರಾಸರಿ ಮತ್ತು 113 ಸ್ಟ್ರೈಕ್ ರೇಟ್ನಲ್ಲಿ 113 ರನ್ ಗಳಿಸಿದ್ದಾರೆ. ಅವರು ಗುಂಪು ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಿರ್ಣಾಯಕ ಅರ್ಧಶತಕ ಗಳಿಸಿದ್ದರು. ಉತ್ತಪ್ಪ ಸೆಪ್ಟೆಂಬರ್ 2022 ರಲ್ಲಿ ಕ್ರೀಡೆಗೆ ವಿದಾಯ ಹೇಳಿದ್ದಾರೆ. ಅಂದಿನಿಂದ ವೀಕ್ಷಕವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಆರ್.ಪಿ.ಸಿಂಗ್
ಎಡಗೈ ವೇಗಿ 2007 ರ ಟಿ 20 ವಿಶ್ವಕಪ್ನ ಭಾರತದ ಪರ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಏಳು ಪಂದ್ಯಗಳಿಂದ 12.66 ಸರಾಸರಿ ಮತ್ತು 12 ಸ್ಟ್ರೈಕ್ ರೇಟ್ನೊಂದಿಗೆ 12 ವಿಕೆಟ್ ಪಡೆದಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಉಮರ್ ಗುಲ್ ನಂತರದ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ವೇಗಿ 13 ವಿಕೆಟ್ ಪಡೆದಿದ್ದರು. ಸೆಪ್ಟೆಂಬರ್ 2018 ರಲ್ಲಿ ಕ್ರಿಕೆಟ್ನಿಂದ ನಿವೃತ್ತರಾದ ನಂತರ ಆರ್ಪಿ ಸಿಂಗ್ ಹಿಂದಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.
ಇರ್ಫಾನ್ ಪಠಾಣ್
ಆಲ್ರೌಂಡರ್ ಬ್ಯಾಟಿಂಗ್ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ. ಆದರೆ ಚೆಂಡಿನೊಂದಿಗೆ ನಾಯಕ ಧೋನಿಗೆ ಉತ್ತಮ ಆಯ್ಕೆಯಾಗಿದ್ದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಿರ್ಣಾಯಕ ಮೂರು ವಿಕೆಟ್ ಸೇರಿದಂತೆ ಇರ್ಫಾನ್ ಆರು ಇನಿಂಗ್ಸ್ಗಳಲ್ಲಿ 10 ವಿಕೆಟ್ ಪಡೆದಿದ್ದರು. ಬರೋಡಾ ಕ್ರಿಕೆಟಿಗ 2020 ರಲ್ಲಿ ನಿವೃತ್ತರಾಗಿದ್ದಾರೆ. ಆದರೆ ಲೆಜೆಂಡ್ಸ್ ಲೀಗ್ನಲ್ಲಿ ಆಡುತ್ತಿದ್ದಾರೆ. ಅವರು ಅತ್ಯಂತ ಜನಪ್ರಿಯ ವಿಕ್ಷಕ ವಿವರಣೆಗಾರರಾಗಿದ್ದಾರೆ.
ರೋಹಿತ್ ಶರ್ಮಾ
ಪ್ರಸ್ತುತ ಭಾರತದ ನಾಯಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಿ20 ಐ ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ತಮ್ಮ ಎರಡನೇ ಪ್ರದರ್ಶನದಲ್ಲಿ, ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 40 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿ ಭಾರತಕ್ಕೆ 37 ರನ್ಗಳ ಗೆಲುವು ತಂದುಕೊಟ್ಟರು. ಫೈನಲ್ಲ್ಲಿ ಮುಂಬೈ ಬ್ಯಾಟರ್ 16 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ಭಾರತದ ಸ್ಕೋರ್ 150 ರನ್ ಗಡಿ ದಾಟಲು ನೆರವಾಗಿದ್ದರು. ಮುಂಬರುವ ಟಿ 20 ವಿಶ್ವ ಕಪ್ನಲ್ಲಿ ಅವರು ಭಾರತ ತಂಡದ ನೇತೃತ್ವ ವಹಿಸಿದ್ದಾರೆ.
ಹರ್ಭಜನ್ ಸಿಂಗ್
ಲೆಜೆಂಡರಿ ಆಫ್-ಸ್ಪಿನ್ನರ್ ಏಳು ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದಿದ್ದರು. ಅವರು 26 ಸರಾಸರಿ ಮತ್ತು 19.71 ಸ್ಟ್ರೈಕ್ ರೇಟ್ ನೊಂದಿಗೆ ಬೌಲಿಂಗ್ ಮಾಡಿದ್ದರು. ಅವರ ಎಕಾನಮಿ ರೇಟ್ 8 ಕ್ಕಿಂತ ಕಡಿಮೆ ಇತ್ತು. ಸ್ಪಿನ್ನರ್ಗಳಿಗೆ ಅನುಕೂಲವಲ್ಲದ ಪಿಚ್ನಲ್ಲಿ ಉತ್ತಮ ಸಾಧನೆಯೇ ಆಗಿತ್ತು. ಹರ್ಭಜನ್ ಸಿಂಗ್ 2021 ರ ಡಿಸೆಂಬರ್ನಲ್ಲಿ ನಿವೃತ್ತರಾದರು. ಹಿಂದಿ ಕಾಮೆಂಟರಿ ಸರ್ಕೀಟ್ನ ಜನಪ್ರಿಯ ವ್ಯಕ್ತಿ. ಜತೆಗೆ ಆಪ್ ಮೂಲಕ ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ.
ವೀರೇಂದ್ರ ಸೆಹ್ವಾಗ್
ಅಪ್ರತಿಮ ಆರಂಭಿಕ ಆಟಗಾರ ದೊಡ್ಡ ಸ್ಕೋರ್ ಮಾಡಲೇ ಇಲ್ಲ. ಆದರೆ ಕ್ಷಿಪ್ರ ಆರಂಭ ಕೊಟ್ಟಿದ್ದರು. ಐದು ಇನ್ನಿಂಗ್ಸ್ಗಳಲ್ಲಿ 26.60 ಸರಾಸರಿ ಮತ್ತು 138.54 ಸ್ಟ್ರೈಕ್ ರೇಟ್ನಲ್ಲಿ 133 ರನ್ ಗಳಿಸಿದ್ದಾರೆ. 2015 ರಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದ ನಂತರ, ಸೆಹ್ವಾಗ್ ವೀಕ್ಷಕ ವಿವರಣೆಗೆ ಹೆಸರುವಾಸಿಯಾಗಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್ ಆರು ಇನಿಂಗ್ಸ್ಗಳಲ್ಲಿ 37.83 ಸರಾಸರಿಯಲ್ಲಿ 129.71 ಸ್ಟ್ರೈಕ್ ರೇಟ್ನಲ್ಲಿ 227 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಫೈನಲ್ ಪಂದ್ಯದಲ್ಲಿ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 75 ರನ್ ಬಾರಿಸಿದ್ದರು. ಮಾರ್ಚ್ 2019ರಲ್ಲಿ ನಿವೃತ್ತರಾದರು. ಗಂಭೀರ್ ರಾಜಕೀಯಕ್ಕೆ ಸೇರುವ ಮೊದಲು ವೀಕ್ಷಕವಿವರಣೆಗಾರರಾಗಿ ಕೆಲಸ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ತಮ್ಮ ಕೋಚಿಂಗ್ ವೃತ್ತಿಜೀವನದ ಮೇಲೆ ಗಮನ ಹರಿಸಲು ರಾಜಕೀಯವನ್ನು ತೊರೆದಿದ್ದಾರೆ. 2024ರಲ್ಲಿ ಅವರು ಕೆಕೆಆರ್ ತಂಡಕ್ಕೆ ಮಾರ್ಗದರ್ಶಕರ ಪಾತ್ರದಲ್ಲಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ.
ಯುವರಾಜ್ ಸಿಂಗ್
2007 ಮತ್ತು 2011ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಲೆಜೆಂಡರಿ ಆಲ್ರೌಂಡರ್ ಐದು ಇನ್ನಿಂಗ್ಸ್ಗಳಿಂದ 29.60 ಸರಾಸರಿಯಲ್ಲಿ 148 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 194.73 ಆಗಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ನಲ್ಲಿ ಅವರು ಬಾರಿಸಿದ ಆರು ಸಿಕ್ಸರ್ಗಳು ಯುವರಾಜ್ ಅವರ ವೃತ್ತಿಜೀವನದ ಪ್ರಮುಖ ಘಟನೆ. ಎಡಗೈ ಬ್ಯಾಟರ್ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ 30 ಎಸೆತಗಳಲ್ಲಿ 70 ರನ್ ಗಳಿಸಿದ್ದರು. ಪಂಜಾಬ್ ಕ್ರಿಕೆಟಿಗ 2024 ರ ಟಿ 20 ವಿಶ್ವಕಪ್ನ ರಾಯಭಾರಿಗಳಲ್ಲಿ ಒಬ್ಬರು. 42 ವರ್ಷದ ಆಟಗಾರ ಜೂನ್ 2019 ರಲ್ಲಿ ನಿವೃತ್ತರಾದರು. ಅವರು ಪಂಜಾಬ್ನ ಯುವ ಕ್ರಿಕೆಟಿಗರಾದ ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಎಂಎಸ್ ಧೋನಿ
ಪಂದ್ಯಾವಳಿಯುದ್ದಕ್ಕೂ ಧೋನಿ ಇಡೀ ತಂಡವನ್ನು ಒಂದು ಶಕ್ತಿಯಾಗಿ ರೂಪಿಸಿದವರು ಧೋನಿ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ 33 ಎಸೆತಗಳಲ್ಲಿ 45 ರನ್ ಬಾರಿಸಿದ್ದರು. ಸೆಮಿಫೈನಲ್ನಲ್ಲಿ ಆಸೀಸ್ ವಿರುದ್ಧ ಅವರು 18 ಎಸೆತಗಳಲ್ಲಿ 36 ರನ್ ಗಳಿಸಿದ್ದು ಕೂಡ ಪ್ರಭಾವಶಾಲಿ ಇನ್ನಿಂಗ್ಸ್ . 2014ರ ಡಿಸೆಂಬರ್ನಲ್ಲಿ ಧೋನಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದಾಗ್ಯೂ, ಅವರು ಆಗಸ್ಟ್ 2020 ರವರೆಗೆ ಕಿರು ಸ್ವರೂಪಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 42ರ ಹರೆಯದ ಧೋನಿ ಇತ್ತೀಚೆಗೆ ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.