ಬೆಂಗಳೂರು: ಚುಟುಕು ಕ್ರಿಕೆಟ್ ಸಮರವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೇವಲ 4 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬಾರಿ ಗರಿಷ್ಠ 20 ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ. ಅಮೆರಿಕ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಜತೆ ಸೇರಿಕೊಂಡು ಜಂಟಿ ಕ್ರಿಕೆಟ್ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ. ಟೂರ್ನಿ ಆರಂಭಕ್ಕೂ ಮುನ್ನ ಇದುವರೆಗಿನ ಟಿ20 ವಿಶ್ವ ಕಪ್ (T20 World Cup 2024) ಇತಿಹಾಸದಲ್ಲಿ ಎಂದೂ ಮರೆಯದ ಕೆಲ ಸ್ಮರಣೀಯ ಸನ್ನಿವೇಶಗಳ ಇಣುಕು ನೋಡ ಇಂತಿದೆ.
ಯುವರಾಜ್ ಸಿಂಗ್ ಸಿಕ್ಸ್ ಸಿಕ್ಸರ್
ಭಾರತದ ಸ್ಟಾರ್ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ 2007 ರ ಟಿ20 ವಿಶ್ವ ಕಪ್‌ನಲ್ಲಿ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ 6 ಸಿಕ್ಸರ್(yuvraj singh 6 sixes) ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇಂಗ್ಲೆಂಡ್ ತಂಡದ ಫ್ಲಿಂಟಾಫ್ ಅವರು ಯುವಿಯನ್ನು ಕೆಣಕಿದ ಕಾರಣ ಸಿಟ್ಟಿಗೆದ್ದ ಯುವಿ ಮುಂದಿನ ಓವರ್‌ನಲ್ಲಿ ಬ್ರಾಡ್ಗೆ ಸಿಕ್ಸರ್ಗಳ ರುಚಿ ತೋರಿಸಿದರು. ಈ ಘಟನೆ ಪ್ರತಿ ಟಿ20 ವಿಶ್ವ ಕಪ್ ಆರಂಭಗೊಂಡಾಗಲೂ ಮುನ್ನಲೆಗೆ ಬಂದೇ ಬರುತ್ತದೆ. ಅದರಂತೆ ಟಿ20 ವಿಶ್ವ ಕಪ್ ಎಂದರೆ ಯುವಿಯ 6 ಸಿಕ್ಸರ್ ಎಂದೇ ಪ್ರಸಿದ್ಧಿ ಹೊಂದಿದೆ. ಯುವರಾಜ್ ಬಳಿಕ ದಕ್ಷಿಣ ಆಫ್ರಿಕಾ ತಂಡದ ಹರ್ಷಲ್ ಗಿಬ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಕಾರ್ಲೊಸ್ ಬ್ರಾಥ್‌ವೇಟ್ ಅಸಾಮ್ಯಾನ್ಯ ಬ್ಯಾಟಿಂಗ್
2016ರ ಟಿ20 ವಿಶ್ವ ಕಪ್ ಫೈನಲ್ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ಅಂತಿಮ ಓವರ್‌ನಲ್ಲಿ 19 ರನ್ ಬೇಕಿತ್ತು. ಈ ಓವರ್ ಎಸೆಯಲು ಬಂದ ಬೆನ್ ಸ್ಟೋಕ್ಸ್ಗೆ ಕ್ರೀಸ್ನಲ್ಲಿದ್ದ ಕಾರ್ಲೊಸ್ ಬ್ರಾಥ್‌ವೇಟ್ ಸತತ ನಾಲ್ಕು ಸಿಕ್ಸರ್ ಸಿಡಿಸಿ ವೆಸ್ಟ್ ಇಂಡೀಸ್ಗೆ ಗೆಲುವು ತಂದು ಕೊಟ್ಟರು. ಈ ವೇಳೆ ಕಾಮೆಂಟರಿ ಪ್ಯಾನಲ್ನಲ್ಲಿದ್ದ ಇಯಾನ್ ಬಿಷಪ್ ಕಾರ್ಲೊಸ್ ಬ್ರಾಥ್‌ವೇಟ್, ಹೆಸರನ್ನು ನೆನಪಿಡಿ! (‘Remember the Name’) ಎಂದು ಹೇಳುವ ಮೂಲಕ ವಿಂಡೀಸ್ ಗೆಲುವಿನ ಸಂಭ್ರಮದಲ್ಲಿ ತಾವೂ ಕೂಡ ಭಾಗಿಯಾದರು.
ಇದನ್ನೂ ಓದಿ T20 World Cup 2024: ಟಿ20 ವಿಶ್ವ ಕಪ್‌ನಲ್ಲಿ ಟೀಮ್ ಇಂಡಿಯಾದ ಮುಂದಿರುವ ಸವಾಲುಗಳೇನು?
ಪಾಕ್ ವಿರುದ್ಧ ಗೆದ್ದು ಹೀರೊ ಆದ ಜೋಗಿಂದರ್ ಶರ್ಮಾ
ಟಿ20 ವಿಶ್ವ ಕಪ್‌ನ ಉದ್ಘಾಟನಾ ಋತುವಿನಲ್ಲಿ ಭಾರತದ ಜೋಗಿಂದರ್ ಶರ್ಮಾ ಹೀರೊ ಆಗಿ ಹೊರಹೊಮ್ಮಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್ನಲ್ಲಿ ಅಂತಿಮ ಓವರ್ ಎಸೆದ ಜೋಗಿಂದರ್ ಪಾಕ್ ಬ್ಯಾಟರ್ ಮಿಸ್ಬಾ-ಉಲ್-ಹಕ್ ಅವರ ನಿರ್ಣಾಯಕ ವಿಕೆಟ್ ಪಡೆದು ಭಾರತಕ್ಕೆ ಗೆಲುವು ತಂದು ಕೊಟ್ಟರು. ಜೋಗಿಂದರ್ ಎಸೆತದಲ್ಲಿ ಎಸ್ ಶ್ರೀಶಾಂತ್ ಅವರಿಗೆ ಮಿಸ್ಬಾ ಕ್ಯಾಚ್ ನೀಡಿದರು. ಈ ಮೂಲಕ ಭಾರತ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಸಂಭ್ರಮಿಸಿತು.
ರಂಗನಾ ಹೆರಾತ್ ಶ್ರೇಷ್ಠ ಬೌಲಿಂಗ್ ಸಾಧನೆ
ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ನರ್ ರಂಗನಾ ಹೆರಾತ್ ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 3.3 ಓವರ್‌ಗಳಲ್ಲಿ 2 ಮೇಡನ್ ಸಹಿತ ಕೇವಲ 3 ರನ್ ಬಿಟ್ಟುಕೊಟ್ಟು 5 ವಿಕೆಟ್ ಉರುಳಿಸಿದರು. ನ್ಯೂಜಿಲೆಂಡ್ ತಂಡ ಕೇವಲ 15.3 ಓವರ್‌ಗಳಲ್ಲಿ 60 ರನ್‌ಗಳಿಗೆ ಆಲೌಟ್ ಆಯಿತು. ಹೆರಾತ್ ಅವರ ಈ ಬೌಲಿಂಗ್ ಸಾಧನೆ ಈ ವರೆಗಿನ ಟಿ 20 ವಿಶ್ವ ಕಪ್‌ನಲ್ಲಿ ಶ್ರೇಷ್ಠ ಸಾಧನೆಯಾಗಿ ಉಳಿದಿದೆ.
ಧೋನಿ ರನೌಟ್
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2016ರ ಟಿ20 ವಿಶ್ವ ಕಪ್‌ನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಕೊನೆಯ ಎಸೆತದಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೇವಲ 2 ಸೆಕೆಂಡುಗಳಲ್ಲಿ ರನ್ ಔಟ್ ಮಾಡಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಧೋನಿ ಅವರ ಈ ಚುರುಕಿನ ರನ್ ಔಟ್ ಪ್ರಪಂಚದಾದ್ಯಂತ ಭಾರೀ ಸುದ್ದಿಯಾಗಿತ್ತು. ಉಸೇನ್ ಬೋಲ್ಟ್ ಅವರಿಗೆ ಧೋನಿ ಪ್ರತಿಸ್ಪರ್ಧಿ ಎಂದು ಕೆಲವರು ಹೋಲಿಕೆ ಮಾಡಿದ್ದರು.