Site icon Vistara News

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

T20 World Cup 2024

T20 World Cup 2024: Pakistan announce 15-member squad for T20 World Cup

ಕರಾಚಿ: ಇದೇ ಜೂನ್​ 1ರಿಂದ ಆರಂಭಗೊಳ್ಳಲಿರುವ ಪುರುಷರ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಪಾಲ್ಗೊಳ್ಳುವ 20 ದೇಶಗಳ ಪೈಕಿ 19 ದೇಶಗಳು ತನ್ನ ತಂಡವನ್ನು ಹಲವು ದಿನಗಳ ಹಿಂದೆಯೇ ಪ್ರಕಟಿಸಿತ್ತು. ಆದರೆ, ಪಾಕಿಸ್ತಾನ ಮಾತ್ರ ತಂಡ ಪ್ರಕಟಕ್ಕೆ ಮೀನ-ಮೇಷ ಎಣಿಸುತ್ತಿತ್ತು. ಇದೀಗ ಕೊನೆಗೂ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ(Pakistan squad). ಶುಕ್ರವಾರ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ(Mohsin Naqvi) ಸುದ್ದಿಗೋಷ್ಠಿ ನಡೆಸಿ ತಂಡವನ್ನು ಪ್ರಕಟಿಸಿದ್ದಾರೆ.

“ಇದು ಯುವ ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿರುವ ಅತ್ಯಂತ ಪ್ರತಿಭಾವಂತ ಮತ್ತು ಸಮತೋಲಿತ ತಂಡವಾಗಿದೆ” ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಾಬರ್​ ಅಜಂ ತಂಡದ ನಾಯಕನಾಗಿದ್ದಾರೆ. ಅಬ್ರಾರ್ ಅಹ್ಮದ್, ಅಜಮ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಸೈಮ್ ಅಯೂಬ್ ಮತ್ತು ಉಸ್ಮಾನ್ ಖಾನ್ ಅವರು ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅವಕಾಶ ಪಡೆದ ಆಟಗಾರರು. ಆದರೆ ಹಿರಿಯ ಆಟಗಾರ ಹಸನ್ ಅಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಐಸಿಸಿ ನಿಯಮದ ಪ್ರಕಾರ ಮೇ 1 ತಂಡದ ಆಯ್ಕೆಗೆ ಅಂತಿಮ ದಿನವಾಗಿತ್ತು. ಈ ವೇಳೆ ಪಾಕ್​ ತನ್ನ ತಂಡವನ್ನು ಪ್ರಕಟಿಸಿರಲಿಲ್ಲ. ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿತ್ತು. ಇದೇ ದಿನ ತನ್ನ ತಂಡವನ್ನು ಪ್ರಟಿಸಿದೆ. ಪ್ರಮುಖ ಟಿ20 ಆಟಗಾರರಾದ ಮೊಹಮ್ಮದ್‌ ರಿಜ್ವಾನ್‌, ಆಜಂ ಖಾನ್‌, ಇರ್ಫಾನ್‌ ಖಾನ್‌ ನಿಯಾಜಿ ಮತ್ತು ಹ್ಯಾರಿಸ್‌ ರೌಫ್ ಅವರು ಫಿಟ್‌ನೆಸ್‌ ಹೊಂದಿಲ್ಲದ ಕಾರಣ ಪಾಕ್​ ಈ ತಂತ್ರವನ್ನು ಬಳಸಿತ್ತು.

ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮಾರ್ಗದರ್ಶನದಲ್ಲಿ ಪಾಕಿಸ್ತಾನ ಈ ಬಾರಿ ಟಿ20 ವಿಶ್ವಕಪ್​ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ. ಪಾಕಿಸ್ತಾನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಅಮೆರಿಕ ವಿರುದ್ಧ ಜೂನ್​ 6ರಂದು ಆಡಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

ಇಂಡೋ-ಪಾಕ್​ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ.

ಪಾಕಿಸ್ತಾನ ತಂಡ


ಬಾಬರ್ ಅಜಂ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾಹ್ಮಾನ್ ಅಫ್ರಿದಿ, ಉಸ್ಮಾನ್ ಖಾನ್.

Exit mobile version