Site icon Vistara News

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

RSA vs USA

T20 World Cup 2024 Super 8: RSA Won By 18 Runs Against USA

ಆ್ಯಂಟಿಗುವಾ: ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ (T20 World Cup 2024) ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ತಂಡವು ಕ್ರಿಕೆಟ್‌ ಶಿಶು ಅಮೆರಿಕ ತಂಡವನ್ನು (SA vs USA) 18 ರನ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ. ಮತ್ತೊಂದೆಡೆ, ಗ್ರೂಪ್‌ ಹಂತದಲ್ಲಿಯೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಮೆರಿಕ ತಂಡವು ದಕ್ಷಿಣ ಆಫ್ರಿಕಾ ತಂಡಕ್ಕೂ ಸ್ಪರ್ಧೆಯೊಡ್ಡಿ, ಹೋರಾಡಿ ಸೋತಿತು ಎಂಬುದು ಗಮನಾರ್ಹವಾಗಿದೆ.

ವೆಸ್ಟ್‌ ಇಂಡೀಸ್‌ನ ಆ್ಯಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಅಮೆರಿಕ ತಂಡವು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕಾರಣ ಐಡೆನ್‌ ಮಾರ್ಕ್ರಮ್‌ ನೇತೃತ್ವದ ತಂಡವು ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಕ್ವಿಂಟನ್‌ ಡಿಕಾಕ್‌ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ 74 ರನ್‌ ಹಾಗೂ ನಾಯಕ ಐಡೆನ್‌ ಮಾರ್ಕ್ರಮ್‌ ಅವರ ಸಮಯೋಚಿತ 46 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 194 ರನ್‌ ಗಳಿಸಿತು.

ದಕ್ಷಿಣ ಆಫ್ರಿಕಾ ನೀಡಿದ 195 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನತ್ತಿದ ಅಮೆರಿಕ ತಂಡಕ್ಕೆ ಆರಂಭದಲ್ಲೇ ಆಘಾತ ಉಂಟಾಯಿತು. ತಂಡದ ಮೊತ್ತ 33 ಆಗಿದ್ದಾಗ ಸ್ಟೀವನ್‌ ಟೇಲರ್‌, 53 ರನ್‌ ಆಗಿದ್ದಾಗ ನಿತೀಶ್‌ ಕುಮಾರ್‌ ಹಾಗೂ 56 ರನ್‌ ಆಗಿದ್ದಾಗ ನಾಯಕ ಆರೋನ್‌ ಜೋನ್ಸ್‌ ಅವರು ವಿಕೆಟ್‌ ಒಪ್ಪಿಸಿದ ಕಾರಣ ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಆಂಡ್ರೀಸ್‌ ಗೌಸ್‌ ಅವರು ಮನಮೋಹಕ ಆಟವಾಡಿದರು. ಇದು ಒಂದು ಹಂತದಲ್ಲಿ ಅಮೆರಿಕಕ್ಕೆ ಗೆಲುವಿನ ಆಸೆ ಹುಟ್ಟಿಸಿತ್ತು.

ಆಂಡ್ರೀಸ್‌ ಗೌಸ್‌ ಅವರು 47 ಎಸೆತಗಳಲ್ಲಿ 5 ಬೌಂಡರ್‌ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 80 ರನ್‌ ಹಾಗೂ ಹರ್ಮೀತ್‌ ಸಿಂಗ್‌ ಅವರು 22 ಎಸೆತಗಳಲ್ಲಿ 38 ರನ್‌ ಗಳಿಸಿದರು. ಆದರೆ, ಬೇರೆ ಯಾವೊಬ್ಬ ಆಟಗಾರನೂ ಸ್ಫೋಟಕ ಪ್ರದರ್ಶನ ತೋರದ ಕಾರಣ ನಿಗದಿತ 20 ಓವರ್‌ಗಳಲ್ಲಿ ಅಮೆರಿಕ ತಂಡವು 6 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮನಮೋಹಕ ಆಟವಾಡಿದ ಕ್ವಿಂಟನ್‌ ಡಿಕಾಕ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇದನ್ನೂ ಓದಿ: Virat Kohli: 100 ಶತಕ ಬಾರಿಸುವಂತೆ ಕೊಹ್ಲಿಗೆ ಆಶೀರ್ವಾದ ಮಾಡಿದ ವಿಂಡೀಸ್​ ದಂತಕಥೆ ಸರ್ ವೆಸ್ಲಿ ಹಾಲ್

Exit mobile version