ಬೆಂಗಳೂರು: ಕಳೆದ ಮೂರು ತಿಂಗಳುಗಳ ಕಾಲ ಐಪಿಎಲ್ ಗುಂಗಿನಲ್ಲಿದ್ದ ಕ್ರಿಕೆಟ್ ಪ್ರೇಮಿಗಳು ಇನ್ನು ಟಿ20 ವಿಶ್ವಕಪ್(T20 World Cup 2024) ಕಡೆ ತೆರೆದುಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು ಟೂರ್ನಿ ಆರಂಭಕ್ಕೆ ಇನ್ನು ಕೇವಲ 4 ದಿನ ಮಾತ್ರ ಉಳಿದುಕೊಂಡಿದೆ. ಇದುವರೆಗಿನ 8 ಆವೃತ್ತಿಯ ಟಿ20 ವಿಶ್ವ ಕಪ್ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಅಗ್ರ 5 ಆಟಗಾರರನ್ನು ಪಟ್ಟಿ ಮಾಡಲಾಗಿದ್ದು ಈ ವಿವರ ಇಂತಿದೆ.
ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
ಟಿ20 ವಿಶ್ವ ಕಪ್ ಕೂಟದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ ನ್ಯೂಜಿಲ್ಯಾಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್(BB McCullum) ಅವರ ಹೆಸರಿನಲ್ಲಿದೆ. ಬಾಂಗ್ಲಾದೇಶದ ವಿರುದ್ಧ 2012ರ ಆವೃತ್ತಿಯ ಆರಂಭಿಕ ಪಂದ್ಯದ ವೇಳೆ ಮೆಕಲಮ್ 58 ಎಸೆತಗಳಲ್ಲಿ 123 ರನ್ ಗಳಿಸಿದ್ದರು. ಈ ಇನಿಂಗ್ಸ್ ವೇಳೆ ಅವರ ಬ್ಯಾಟ್‌ನಿಂದ 11 ಬೌಂಡರಿ ಮತ್ತು ಏಳು ಸಿಕ್ಸರ್ ಸಿಡಿಯಲ್ಪಟ್ಟಿತು. ಇದು ಸದ್ಯ ದಾಖಲೆಯಾಗಿಯೇ ಉಳಿದಿದೆ.
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
2007ರ ಟಿ20 ವಿಶ್ವ ಕಪ್‌ನ ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲಿ “ಯೂನಿವರ್ಸ್ ಬಾಸ್” ಖ್ಯಾತಿಯ ವಿಂಡೀಸ್ ದೈತ್ಯ ಕ್ರಿಸ್ ಗೇಲ್(Chris Gayl), ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 57 ಎಸೆತಗಳಲ್ಲಿ 7 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡ ಇನಿಂಗ್ಸ್ನಲ್ಲಿ 117 ರನ್ ಗಳಿಸಿದರು. ಗೇಲ್ ಅವರ ಈ ಸ್ಫೋಟಕ ಇನಿಂಗ್ಸ್ ವೇಳೆ 88 ರನ್ ಕೇವಲ ಸಿಕ್ಸರ್ ಮತ್ತು ಬೌಂಡರಿಯಿಂದ ಒಟ್ಟುಗೂಡಿದ್ದವು.
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)
ಇಂಗ್ಲೆಂಡ್ ಕ್ರಿಕೆಟ್ ತಂಡದ ಬಲಗೈ ದಾಂಡಿಗ ಅಲೆಕ್ಸ್ ಹೇಲ್ಸ್(Alex Hales) ಈ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2014ರ ಟಿ20 ವಿಶ್ವ ಕಪ್ನಲ್ಲಿ ಶ್ರೀಲಂಕಾ ವಿರುದ್ಧ 64 ಎಸೆತಗಳಲ್ಲಿ ಅಜೇಯ 116 ರನ್ ಗಳಿಸಿದ್ದರು. ಈ ವೇಳೆ 11 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಯಲ್ಪಟ್ಟಿತು.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು
ಅಹ್ಮದ್ ಶೆಹಜಾದ್ (ಪಾಕಿಸ್ತಾನ)
ಪಾಕಿಸ್ತಾನ ತಂಡದ ಮಾಜಿ ಆಟಗಾರ ಅಹ್ಮದ್ ಶೆಹಜಾದ್ 2014ರ ಟಿ20 ವಿಶ್ವ ಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 62 ಎಸೆತ ಎದುರಿಸಿ 10 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 111 ರನ್ ಗಳಿಸಿದ್ದರು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರರ ಯಾದಿಯಲ್ಲಿ ಶೆಹಜಾದ್ 4ನೇ ಸ್ಥಾನಿಯಾಗಿದ್ದಾರೆ.
ರಿಲೀ ರೋಸೊ
ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟರ್ ರಿಲೀ ರೋಸೊ ಅವರು ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರರ ಯಾದಿಯಲ್ಲಿ 5ನೇ ಸ್ಥಾನಿಯಾಗಿದ್ದಾರೆ. ಕಳೆದ 2022ರಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದಿದ್ದ ಟೂರ್ನಿಯಲ್ಲಿ ರೋಸೊ ಬಾಂಗ್ಲಾದೇಶ ವಿರುದ್ಧ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ 56 ಎಸೆತಗಳಿಂದ 7 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಿಂದ 109 ರನ್ ಬಾರಿಸಿದ್ದರು. ಸದ್ಯ ಈ ಆಟಗಾರರ ಹೆಸರಿನಲ್ಲಿರುವ ದಾಖಲೆಯನ್ನು ಈ ಬಾರಿ ಯಾರು ಮುರಿಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವ ಕಪ್ನಲ್ಲಿ ಟೀಮ್ ಇಂಡಿಯಾದ ಮುಂದಿರುವ ಸವಾಲುಗಳೇನು?