Site icon Vistara News

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

T20 World Cup 2024

ಬಾರ್ಬಡಾಸ್​: ಇದೇ ಜೂನ್​ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್​ ಪಂದ್ಯಾವಳಿಗೆ(T20 World Cup 2024) ಪಾಕಿಸ್ತಾನದ ಉಗ್ರರಿಂದ ದಾಳಿಯ ಬೆದರಿಕೆಯೊಂದು(Terror Threat to T20 World Cup) ಬಂದಿರುವುದಾಗಿ ವರದಿಯಾಗಿದೆ. ಕೆರಿಬಿಯನ್ ದ್ವೀಪಗಳ ಮಾಧ್ಯಮ ವರದಿಗಳ ಪ್ರಕಾರ ಟೂರ್ನಿಯ ಮೊದಲ ಪಂದ್ಯ ನಡೆಯುವ ಪ್ರದೇಶದಲ್ಲಿ ಭಯೋತ್ಪಾದಕ ಎಚ್ಚರಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಈ ಬೆದರಿಕೆ ಉತ್ತರ ಪಾಕಿಸ್ತಾನದಿಂದ ಬಂದಿದೆ ಎಂದು ತಿಳಿಸಿದೆ.

ಪ್ರೊ-ಇಸ್ಲಾಮಿಕ್ ಸ್ಟೇಟ್ (ಐಎಸ್) ಮಾಧ್ಯಮ ಮೂಲಗಳು ಕ್ರೀಡಾಕೂಟಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಅಭಿಯಾನಗಳನ್ನು ಪ್ರಾರಂಭಿಸಿವೆ, ಇದರಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ಉಗ್ರರ ಅಡಗು ತಾಣಗಳಿಂದ ವೀಡಿಯೊ ಸಂದೇಶಗಳ ಮೂಲಕ ಹಲವಾರು ದೇಶಗಳಲ್ಲಿ ದಾಳಿ ನಡೆಸುವ ಮತ್ತು ಈ ಉಗ್ರ ಸಂಚಿನಲ್ಲಿ ಬೆಂಬಲ ನೀಡಲು ಒತ್ತಾಯಿಸಿರುವುದಾಗಿ ಕ್ರಿಕ್‌ಬಜ್‌ ತನ್ನ​ ವರದಿಯಲ್ಲಿ ತಿಳಿಸಿದೆ.

“ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪ್ರತಿಯೊಬ್ಬರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ನಾವು ಸಮಗ್ರ ಮತ್ತು ದೃಢವಾದ ಭದ್ರತಾ ಯೋಜನೆಯನ್ನು ಹೊಂದಿದ್ದೇವೆ ಎಂದು ನಾವು ಎಲ್ಲ ಪಾಲುದಾರರಿಗೆ ಭರವಸೆ ನೀಡಲು ಬಯಸುತ್ತೇವೆ” ಎಂದು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಬೋರ್ಡ್​ ಅಧ್ಯಕ್ಷ ಜಾನಿ ಗ್ರೇವ್ಸ್ ಹೇಳಿದರು.

“ನಾವು ಆತಿಥೇಯ ದೇಶಗಳು ಮತ್ತು ನಗರಗಳಲ್ಲಿನ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಮತ್ತು ನಮ್ಮ ದೇಶದಲ್ಲಿ ನಿಗದಿಯಾದ ಪಂದ್ಯಾವಳಿಗೆ ಯಾವುದೇ ಅಪಾಯವಾಗದಂತೆ ಸೂಕ್ತವಾದ ಯೋಜನೆಗಳು ಜಾರಿಯಲ್ಲಿವೆ” ಎಂದು ಗ್ರೇವ್ಸ್ ಹೇಳಿರುವುದಾಗಿ ಕ್ರಿಕ್‌ಬಜ್‌ ವರದಿ ಮಾಡಿದೆ. ವೆಸ್ಟ್ ಇಂಡೀಸ್‌ನಲ್ಲಿ ಆಂಟಿಗುವಾ ಬಾರ್ಬುಡಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ ಸೇರಿದಂತೆ ಆರು ಸ್ಥಳಗಳಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ ICC Women’s T20 World Cup: ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್​

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ತಲಾ 2 ಅಭ್ಯಾಸ ಪಂದ್ಯ


ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Exit mobile version