Site icon Vistara News

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

T20 world Cup 2024

ಬಾರ್ಬಡೋಸ್​: ಟಿ20 ವಿಶ್ವ ಕಪ್​ 2024ರ (T20 world Cup 2024) ಬಿ ಗುಂಪಿನ ಸೂಪರ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಯುಎಸ್​ಎ ತಂಡ 10 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಯುಎಸ್​ಎ ತಂಡದ ಸೆಮಿಫೈನಲ್​ಗೇರುವ ಕಸನು ಕಮರಿದೆ. ಈ ಹಂತದಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದಾಗ್ಯೂ ಮೊಟ್ಟ ಮೊದಲ ಬಾರಿಗೆ ವಿಶ್ವ ಕಪ್​ ವೇದಿಕೆ ಪ್ರವೇಶಿಸಿದ್ದ ಯುಎಸ್​ಎ ತಂಡ ಸೂಪರ್ 8 ಹಂತಕ್ಕೇರುವ ಮೂಲಕ ಮೂಲಕ ಅವಿಸ್ಮರಣೀಯ ಸಾಧನೆ ಮಾಡಿದೆ. ಅತ್ತ ಇಂಗ್ಲೆಂಡ್ ತಂಡ ಆಡಿರುವ ಮೂರರಲ್ಲಿ 2 ಪಂದ್ಯಗಳನ್ನು ಗೆದ್ದು ಸದ್ಯ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇಲ್ಲಿನ ಕೆನ್ಸಿಂಗ್ಟನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ಬಳಗ 18.5 ಓವರ್​ಗಳಲ್ಲಿ 115 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಇನ್ನೂ 64 ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟವೇ ಇಲ್ಲದೆ 117 ರನ್​ ಗಳಿಸಿ ಗೆಲುವು ಸಾಧಿಸಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಲು ಹೊರಟ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್​ಗಳಾದ ಜೋಸ್​ ಬಟ್ಲರ್​ (83) ಹಾಗೂ ಫಿಲ್​ ಸಾಲ್ಟ್​ (25) ಯುಎಸ್​ಎ ಬೌಲರ್​ಗಳನ್ನು ಚೆಂಡಾಡಿದರು. ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಆಡಿದ ಈ ಜೋಡಿ ಬಳಿಕ ಏಕಾಏಕಿ ವೇಗ ವೃದ್ಧಿಸಿತು. ಯುಎಸ್​ಎ ತಂಡದ ರೂಪಿಸಿದ ಯಾವುದೇ ರಣತಂತ್ರಕ್ಕೆ ಬಗ್ಗದ ಅವರಿಬ್ಬರೂ ನಿರಾಯಾಸವಾಗಿ ಪಂದ್ಯ ಗೆಲ್ಲಿಸಿದರು.

ಇದನ್ನೂ ಓದಿ: IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

ಯುಎಸ್​​ಎ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಯುಎಸ್​ಎ ತಂಡ ಉತ್ತಮವಾಗಿ ಆಡಲಿಲ್ಲ. ಅಂಡ್ರೀಸ್ ಗೌಸ್​ 8 ರನ್​ಗೆ ವಿಕೆಟ್ ಒಪ್ಪಿಸಿದರೆ ಸ್ಟೀವನ್ ಟೈಲರ್​ 12 ರನ್​ಗಳಿಗೆ ಸೀಮಿತಗೊಂಡರು. ನಿತೀಶ್ ಕುಮಾರ್​ 30 ರನ್ ಬಾರಿಸಿದರೆ ಆ್ಯರೋನ್ ಜೋನ್ಸ್​ 10 ರನ್​ಗೆ ಔಟಾದರು. ಕೋರಿ ಆ್ಯಂಡರ್ಸನ್​​ 29 ರನ್ ಬಾರಿಸಿದರೆ ಮಿಲಿಂದ್ ಕುಮಾರ್ 4 ರನ್​ಗೆ ವಿಕೆಟ್​ ಒಪ್ಪಿಸಿದರು. ಹರ್ಮೀತ್​ ಸಿಂಗ್​ 21 ರನ್​ಗೆ ಔಟಾದಾಗ ಯುಎಸ್​ಎ 115 ರನ್​ಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, ಅ ಬಳಿಕ ಬಂದ ಎಲ್ಲ ಬ್ಯಾಟರ್​​ಗಳು ಶೂನ್ಯಕ್ಕೆ ಔಟಾದರು. ಕ್ರಿಸ್​ ಜೋರ್ಡಾನ್​ ಸತತ ನಾಲ್ಕು ವಿಕೆಟ್ ಪಡೆದರು. ಹೀಗಾಗಿ ಯುಎಸ್​ಎ 115 ರನ್​ಗಳಿಗೆ ಆಲ್​ಔಟ್​ ಆಯಿತು.

ಇಂಗ್ಲೆಂಡ್ ಪರ ಜೋರ್ಡಾನ್​ 4 ವಿಕೆಟ್ ಉರುಳಿಸಿದರೆ ಅದಿಲ್ ರಶೀದ್ ಹಾಗೂ ಸ್ಯಾಮ್​ ಕರ್ರನ್​ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ರೀಸ್​ ಟೋಪ್ಲೆ ಹಾಗೂ ಲಿವಿಂಗ್​ಸ್ಟನ್​ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version